ಶ್ರೀರಂಗಪಟ್ಟಣದ ಸ್ನಾನಘಟ್ಟದಲ್ಲಿ ಮಂಗಳವಾರ ಕಾವೇರಿ ನದಿಯ ಸ್ವಚ್ಛತಾ ಶ್ರಮದಾನ ಶಿಬಿರವನ್ನು ನಡೆಸಲಾಯಿತು. 
ಜಿಲ್ಲೆ

ಜಲಮಾಲಿನ್ಯ ತಡೆಗೆ ಜಾಗೃತಿ ಅವಶ್ಯ

ರವಿಕುಮಾರ್ ಪಿ. ಕೆ

ಶ್ರೀರಂಗಪಟ್ಟಣ: ಜಲಮಾಲಿನ್ಯ ತಡೆಗಟ್ಟಲು ಸಾರ್ವಜನಿಕರಿಗೆ ಜಾಗೃತಿ ನೀಡಿ ಎಚ್ಚರಿಸುವುದು ಅವಶ್ಯಕ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಅಶ್ವಿನಿ ತಿಳಿಸಿದರು.

ಪಟ್ಟಣದ ಸ್ನಾನಘಟ್ಟದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ಕಸಮುಕ್ತ ಭಾರತ ಜಾಗೃತಿ ಆಂದೋಲನದ ನಿಮಿತ್ತ ಕಾವೇರಿ ನದಿಯ ಸ್ವಚ್ಛತಾ ಶ್ರಮದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ನದಿಗಳ ಮಾಲಿನ್ಯ ತಡೆಗಟ್ಟಿ, ಸ್ವಚ್ಛ ನೀರು ಮತ್ತು ಪ್ರಕೃತಿ ಉಳಿವಿಗೆ ಮೊದಲ ಆದ್ಯತೆ ನೀಡಬೇಕು ಎಂದರು.
ಈ ಸಂಬಂಧ ಸ್ವಯಂ ಸೇವಾ ಸಂಸ್ಥೆಗಳು, ಎನ್‌ಎಸ್‌ಎಸ್, ಎನ್‌ಸಿಸಿ ಇತರ ಸಂಸ್ಥೆಗಳ ಪಟ್ಟಿಗೆ ಜನರ ಕಾರ್ಯಕ್ರಮವಾಗಿ ಕಸಮುಕ್ತ ಭಾರತವನ್ನು ನಿರ್ಮಿಸುವುದು ಅವಶ್ಯಕ ಎಂದರು.

ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೇಶ್ ಮಾತನಾಡಿ, ತ್ಯಾಜ್ಯ ಮತ್ತು ಪ್ರಕೃತಿ ಅಸಮತೋಲನವನ್ನು ಕಾಪಾಡಲು ನದಿಗಳ ಸಂರಕ್ಷಣೆ ಅವಶ್ಯಕ ಎನಿಸಿದೆ. ಮಾಲಿನ್ಯ ರಹಿತವಾದ ನೀರನ್ನು ನಾವು ಕುಡಿಯಬೇಕು. ಜೀವ ಸಂಕುಲಗಳ ಉಳಿವಿಗೆ ಪ್ರಕೃತಿಯ ವಿವಿಧ ತಲ್ಲಣಗಳನ್ನು ಶಮನಗೊಳಿಸಿ ನಾವು ಜೀವಿಸುವಂತಾಗಲು ಪ್ರತಿಯೊಬ್ಬರೂ ಕೂಡ ಪ್ರಕೃತಿ ಮತ್ತು ಜೀವಸಂಕುಲ ಉಳಿವಿಗೆ ಮುಂದಾಗಬೇಕು ಎಂದರು.

ಪರಿಸರ ಮಿತ್ರ ರಮೇಶ್, ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಮೂರ್ತಿ, ಪುರಸಭೆ ಆರೋಗ್ಯ ನಿರೀಕ್ಷಕಿ ಜಲಜಾಕ್ಷಿ ಹಾಜರಿದ್ದರು. ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾವಿದರಾದ ವೈರಮುಡಿ, ಬಸವರಾಜ್ ಸಂತೆಕಸಲಗೆರೆ, ಶೇಖರ ಹನಿಯಂಬಾಡಿ ಅವರು ಜಲಸಂರಕ್ಷಣೆ ಕುರಿತಾದ ಗೀತೆಗಳು ಮತ್ತು ರೂಪಕಗಳನ್ನು ಪ್ರಸ್ತುತಪಡಿಸಿದರು.