ಮಂಗಳೂರು: ಮದುವೆ ಸಮಾರಂಭ ಎಂದಾಕ್ಷಣ ನೀರಿನ ಬಾಟಲ್, ಐಸ್‌ಕ್ರೀಮ್ ಕಪ್, ಸ್ಪೂನ್, ಜ್ಯೂಸ್ ಲೋಟ ಹೀಗೆ ಎಲ್ಲವೂ ಪ್ಲಾಸ್ಟಿಕ್‌ನದ್ದೇ ಆಗಿರುತ್ತದೆ. ಕೆಲವೇ ಗಂಟೆಗಳ ಕಾಲ ನಡೆಯುವ ಸಮಾರಂಭವಾದರೂ ಕ್ವಿಂಟಾಲ್‌ಗಟ್ಟಲೆ ಪ್ಲಾಸ್ಟಿಕ್ ಪ್ರಕೃತಿ ಮಡಿಲಿಗೆ ಸೇರುತ್ತದೆ.
ಇದಕ್ಕೆ ಅಪವಾದವೆಂಬಂತೆ ಮಂಗಳೂರಿನಲ್ಲಿ ಒಂದು ಮದುವೆಯಲ್ಲಿ ಮರುಬಳಕೆ ಸಾಧ್ಯವಿಲ್ಲದ ಒಂದೇ ಒಂದು ಪ್ಲಾಸ್ಟಿಕ್ ಕೂಡಾ ಬಳಕೆ ಮಾಡಿಲ್ಲ. ನಗರದ ಸೂರ್ಯನಾರಾಯಣ ದೇವಸ್ಥಾನದಲ್ಲಿ ಗುರುವಾರ ಜರುಗಿದ ಹರಿಪ್ರಸಾದ್ ಮತ್ತು ವಿನಯಶ್ರೀ ಅವರ ಮದುವೆ ಸಮಾರಂಭದಲ್ಲಿ ಇಂತಹದೊಂದು ಪರಿಸರ ಜಾಗೃತಿ ಮೂಡಿಸುವ ಅಪೂರ್ವ ಕೆಲಸ ನಡೆದಿದೆ.
ಪ್ಲಾಸ್ಟಿಕ್ ವಸ್ತುಗಳಿಗೆ ಪರ್ಯಾಯವಾಗಿ ಅಡಕೆ ಹಾಳೆ ತಟ್ಟೆ, ಚಮಚ, ಮಣ್ಣಿನ ಕುಲ್ಲಡ್(ಲೋಟ) ಮೊದಲಾದವುಗಳನ್ನು ಬಳಸಲಾಗಿದೆ. ಲಸ್ಸಿಗಾಗಿ ಮಣ್ಣಿನ ಕುಲ್ಲಡ್, ಮಜ್ಜಿಗೆಗೆ ಪೇಪರ್ ಲೋಟ, ನೀರಿಗೆ ಸ್ಟೀಲ್ ಲೋಟ, ಐಸ್‌ಕ್ರೀಂ, ಸ್ವೀಟ್ ನೀಡಲು ಅಡಕೆ ಹಾಳೆಯ ಪ್ಲೇಟ್, ಚಮಚ ಬಳಸಿದರು. ಇದರಿಂದಾಗಿ ಪ್ಲಾಸ್ಟಿಕ್ ತ್ಯಾಜ್ಯ ಪ್ರಮಾಣ ಶೂನ್ಯವಾಗಿದೆ. ಉತ್ತರ ಭಾರತದಲ್ಲಿ ವ್ಯಾಪಕವಾಗಿ ಬಳಸುವ ಮಣ್ಣಿನ ಕುಲ್ಲಡ್ ಬಳಕೆಯಿಂದ ಪ್ಲಾಸ್ಟಿಕ್ ಸಮಸ್ಯೆಯಿಂದ ಮುಕ್ತಿ ಮಾತ್ರವಲ್ಲದೆ ಕುಂಬಾರರಿಗೆ ಆದಾಯವೂ ಆಗುತ್ತದೆ. ಹಾಳೆ ಪ್ಲೇಟ್ ಬಳಸುವುದರಿಂದ ಅಡಕೆ ಬೆಳೆಗಾರರಿಗೆ ಉತ್ತೇಜನವೂ ಸಿಗುತ್ತದೆ. ಈ ವಿಶಿಷ್ಟ ಪ್ರಯತ್ನಕ್ಕೆ ಮದುವೆಗೆ ಬಂದ ಅತಿಥಿಗಳಿಂದ ಮೆಚ್ಚುಗೆಯೂ ವ್ಯಕ್ತವಾಯಿತು ಎನ್ನುತ್ತಾರೆ ಮದುವೆ ಮನೆಯವರು.
ನಮ್ಮ ಮನೆಯಲ್ಲಿ ಯಾವುದೇ ಶುಭ ಕಾರ್ಯವಾದಾಗ ಸಮಾಜಕ್ಕೆ ಪೂರಕವಾದ ಕಾರ್ಯಕ್ರಮ ಜೋಡಿಸಿಕೊಳ್ಳುತ್ತೇವೆ. ಈ ಬಾರಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದಕ್ಕಾಗಿ ಜಾಗೃತಿ ಮೂಡಿಸಲು ಮರುಬಳಕೆಯಾಗದ ಪ್ಲಾಸ್ಟಿಕ್ ಬಳಸಬಾರದು ಎನ್ನುವ ತೀರ್ಮಾನಕ್ಕೆ ಬಂದೆವು. ಇದಕ್ಕಾಗಿ ಹಾಳೆಯ ತಟ್ಟೆ, ಪೇಪರ್ ಲೋಟ, ಸ್ಟೀಲ್ ಲೋಟ, ಹಾಳೆಯ ಚಮಚ ಸಂಗ್ರಹಿಸಿದೆವು, ಪಾನೀಯಕ್ಕೆ ಲಸ್ಸಿ ಮಾಡುವುದು ನಿರ್ಧಾರ ಮಾಡಿದಾಗ ಉತ್ತರ ಭಾರತದ ಶೈಲಿಯಲ್ಲಿ ಲಸ್ಸಿ ಕುಲ್ಲಡ್‌ಗಳನ್ನು ಪೆರ್ಡೂರಿನ ಕುಂಬಾರರ ಸಹಕಾರಿ ಸಂಘದಿಂದ ತರಿಸಿಕೊಂಡೆವು.ಪ್ಲಾಸ್ಟಿಕ್ ರಹಿತ ಸಮಾರಂಭದ ಟ್ರೆಂಡ್ ಆರಂಭಗೊಂಡು ಪ್ರಕೃತಿ ಮಾತೆಯ ರಕ್ಷಣೆಯಾದರೆ ನಮ್ಮ ಪ್ರಯತ್ನ ಸಾರ್ಥಕ. ವಿಕ್ರಮ್, ವಧುವಿನ ಸಹೋದರ