ಮೈಸೂರು: ನಗರದ ಮಣಿಪಾಲ್ ಆಸ್ಪತ್ರೆಯಿಂದ ರಸ್ತೆ ಸುರಕ್ಷತೆ ಮತ್ತು ಸಂಚಾರ ಅಪಘಾತಗಳ ಸಂದರ್ಭದಲ್ಲಿ ಪ್ರಾಣ ಹಾನಿ ಕಡಿಮೆ ಮಾಡುವ ಬಗ್ಗೆ ಸಂಚಾರ ಪೊಲೀಸರಿಗೆ ಶುಕ್ರವಾರ ಜಾಗೃತಿ ಮೂಡಿಸಲಾಯಿತು.
ಬೇಸಿಕ್ ಲೈಫ್ ಸಪೋರ್ಟ್ ತರಬೇತಿಯಿಂದ ಎಷ್ಟೋ ಜೀವ ಹಾನಿ ತಡೆಬಹುದು. ಒಬ್ಬ ವ್ಯಕ್ತಿಯ ಹೃದಯ ಬಡಿತ ಅಥವಾ ಉಸಿರಾಟ ನಿಂತಾಗ, ವೈದ್ಯಕೀಯ ಸಹಾಯ ಆಗಮಿಸುವ ಮುನ್ನ ಕೈಗೊಳ್ಳಬೇಕಾದ ನಿಯಮಗಳ ಕುರಿತು ಮಾಹಿತಿ ನೀಡಲಾಯಿತು.
ಸಂತ ಫಿಲೋಮಿನಾ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಎಸ್. ಜಾನ್ಹವಿ, ಸಂಚಾರ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಎಚ್. ಪರಶುರಾಮಪ್ಪ ಉದ್ಘಾಟಿಸಿದರು.
ಮಣಿಪಾಲ್ ಆಸ್ಪತ್ರೆಯ ತುರ್ತು ಔಷಧ ವಿಭಾಗದ ಡಾ. ಅಮೋಘ ವರ್ಷ ಮಾತನಾಡಿ, ತುರ್ತು ಸಂದರ್ಭಗಳಲ್ಲಿ, ಪ್ರತಿ ಕ್ಷಣವೂ ಅತ್ಯಮೂಲ್ಯ. ತುರ್ತು ಸನ್ನಿವೇಶಗಳಲ್ಲಿ ಸೂಕ್ತ ವೈದ್ಯಕೀಯ ಸಹಾಯ ದೊರಕುವವರೆಗೆ ವ್ಯಕ್ತಿಯ ಜೀವವನ್ನು ಉಳಿಸುವ ಪ್ರಮುಖ ಪ್ರಾತ್ರ ತಿಳಿದುಕೊಳ್ಳಬೇಕು. ವೈದ್ಯಕೀಯ ವೃತ್ತಿಪರರು ಬರುವ ಮೊದಲು ಜೀವಗಳನ್ನು ಉಳಿಸಲು ಸಹಾಯ ಮಾಡುವ ಮೊದಲ ಪೊಲೀಸರು ಆಗುತ್ತೀರಿ ಎಂದರು.