ಬೆಂಗಳೂರು: ನಮ್ಮ ಮೆಟ್ರೋ ಜಾಲ ವಿಸ್ತರಿಸುತ್ತಿದ್ದು, ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಏರುತ್ತಲೇ ಇದೆ. ಇದು ಸಂತಸದ ಸಂಗತಿಯಾದರೂ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಭದ್ರತಾ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ.
ಮೆಟ್ರೋ ನಿಲ್ದಾಣಗಳಲ್ಲಿ ಭದ್ರತಾ ನಿಯಮಗಳನ್ನು ಉಲ್ಲಂಘಿಸುತ್ತಿರುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಿದೆ. ಪ್ರಯಾಣಿಕರ ವರ್ತನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭದ್ರತಾ ಸಿಬ್ಬಂದಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಇವರೊಂದಿಗೆ ಗೃಹರಕ್ಷಕ ದಳ ಸಿಬ್ಬಂದಿಯೂ ಸಾಥ್ ನೀಡಲಿದೆ.
ನಿಲ್ದಾಣಗಳಲ್ಲಿ ಮೊಬೈಲ್ ನೋಡುತ್ತ ಜೋರಾಗಿ ಹಾಡು ಕೇಳುತ್ತ ಬೇರೆಯವರಿಗೆ ಕಿರಿಕಿರಿ ಉಂಟುಮಾಡುತ್ತಿರುವವರಿಗೆ ಜಾಗೃತಿ ಮೂಡಿಸಲು ಬಿಎಂಆರ್ಸಿಎಲ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರಯಾಣದ ವೇಳೆಯಲ್ಲೂ ಇಯರ್ಫೋನ್ ಬಳಸಿ ಎಂದು ಗೃಹರಕ್ಷಕ ಸಿಬ್ಬಂದಿಗಳು ಜನರಲ್ಲಿ ಅರಿವು ಮೂಡಿಸಿದ್ದಾರೆ.
ಪ್ರಯಾಣಿಕರ ಸಂಖ್ಯೆ ಹೆಚ್ಚಳದಿಂದ ನಿಲ್ದಾಣಗಳಲ್ಲಿ ದಟ್ಟಣೆಯಾಗುತ್ತಿದೆ. ರೈಲು ಫ್ಲಾಟ್ಫಾರ್ಮ್ ಸನಿಹಕ್ಕೆ ಬರುತ್ತಿದ್ದಂತೆ, ಒಳಹೋಗುವ ಧಾವಂತಕ್ಕೆ ಪ್ರಯಾಣಿಕರು ಬಾಗಿಲಿನ ಬಳಿ ಗುಂಪುಗೂಡುತ್ತಾರೆ. ಈ ವೇಳೆ ಸರತಿ ಸಾಲು ಚೆಲ್ಲಾಪಿಲ್ಲಿಯಾಗಿಬಿಡುತ್ತದೆ. ಇಳಿಯುವವರಿಗೆ ಇದರಿಂದ ತೊಂದರೆ ಉಂಟಾಗುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ಸರಿಯಾದ ಸರತಿ ಸಾಲಿನ ವ್ಯವಸ್ಥೆ ಹಾಗೂ ಬೋರ್ಡಿಂಗ್ ಪ್ರೋಟೋಕಾಲ್ ಅನುಸರಿಸುವಂತೆ ಸೂಚನೆ ನೀಡಿದೆ.
ಮೆಟ್ರೋ ಬಳಸುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಕಳೆದ ಜನವರಿಗೆ ಹೋಲಿಸಿದರೆ ಶೇ.16 ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಕಳೆದ ಜುಲೈನಲ್ಲಿ 17 ದಿನ ನಿರಂತರವಾಗಿ 6.1 ಲಕ್ಷ ಮಂದಿ ಪ್ರಯಾಣಿಸಿರುವುದು ಹೊಸ ದಾಖಲೆಯಾಗಿದೆ.
ಫ್ಲಾಟ್ಪಾಮ್ರ್ನಲ್ಲಿ ಸರತಿ ಸಾಲಿನ ಮೂಲಕ ಮೆಟ್ರೋ ರೈಲು ಹತ್ತುವುದರಿಂದ ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಭದ್ರತಾ ಸಿಬ್ಬಂದಿಗಳಿಂದ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಯಾಣದ ವೇಳೆ ಮೊಬೈಲ್ ನೋಡುವುದು ತಪ್ಪಲ್ಲ. ಇದರಿಂದ ಸಹಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ಇಯರ್ಫೋನ್ ಬಳಸಲು ಸೂಚಿಸಲಾಗಿದೆ ಎಂದು ಬಿಎಂಆರ್ಸಿಎಲ್ ಎಂಡಿ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.