ಕುಶಾಲನಗರ: ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಜನರು ಪರಿಸರ ಸ್ನೇಹಿ, ನೈಸರ್ಗಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್‌ನ ಕೊಡಗು ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಟಿ.ಜಿ.ಪ್ರೇಮ ಕುಮಾರ್ ಹೇಳಿದರು.
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಶಾಲೆಯ ರಾಷ್ಟ್ರೀಯ ಹಸಿರುಪಡೆ ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಮತ್ತು ಗೈಡ್ಸ್ ಆಶ್ರಯದಲ್ಲಿ ಏರ್ಪಡಿಸಿದ್ದ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯ ಮಹತ್ವ ಕುರಿತು ಮಾಹಿತಿ ನೀಡಿದರು.
ಗಣೇಶೋತ್ಸವ ಸಂದರ್ಭ ಪಿಒಪಿ ಹಾಗೂ ರಾಸಾಯನಿಕ ಬಣ್ಣ ಬಳಸಿರುವ ಗಣೇಶ ಮೂರ್ತಿಯನ್ನು ಬಳಕೆ ಮಾಡಬಾರದು. ಮಣ್ಣಿನ ಗಣೇಶ ಮೂರ್ತಿ ಬಳಕೆ ಮಾಡುವ ಮೂಲಕ ಸಂರಕ್ಷಣೆಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಹೇಳಿದರು.
ಶಾಲೆಯ ಇಕೋ ಕ್ಲಬ್ ಉಸ್ತುವಾರಿ ಬಿ.ಡಿ.ರಮ್ಯಾ ಮಾತನಾಡಿ, ರಾಸಾಯನಿಕ ಬಳಸಿ ನಿರ್ಮಿಸಿದ ಗಣೇಶ ಮೂರ್ತಿಯನ್ನು ನದಿ, ಕೆರೆಗಳಲ್ಲಿ ವಿಸರ್ಜಿಸುವುದರಿಂದ ಜಲಚರಗಳ ಜೀವಕ್ಕೆ ತೊಂದರೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಜನ ಸಾಮಾನ್ಯರು ಎಚ್ಚರ ವಹಿಸಬೇಕು ಎಂದು ಹೇಳಿದರು.
ಶಿಕ್ಷಕ ಕೆ.ಗೋಪಾಲಕೃಷ್ಣ, ಬಿ.ಎಸ್.ಅನ್ಸಿಲಾ ರೇಖಾ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.
ಜಾಗೃತಿ ಜಾಥಾ: ವಿದ್ಯಾರ್ಥಿಗಳು ನೈಸರ್ಗಿಕ ಗಣಪತಿ ಪ್ರತಿಷ್ಠಾಪಿಸುವಂತೆ ಕೂಡ್ಲೂರು ಗ್ರಾಮದಲ್ಲಿ ಜಾಥಾ ನಡೆಸಿ ಜಾಗೃತಿ ಮೂಡಿಸಿದರು. ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಮಾಲಿನ್ಯ ತಡೆಯಿರಿ, ಬೇಡ ಬೇಡ ಪಿಒಪಿ ಮತ್ತು ರಾಸಾಯನಿಕ ಬಣ್ಣ ಬಳಸಿದ ಗಣೇಶ ಮೂರ್ತಿ ಬಳಕೆ ಬೇಡ, ಮಣ್ಣಿನ ಗಣೇಶ ಬಳಸಿ- ಜಲಮಾಲಿನ್ಯ ತಡೆಯಿರಿ ಇತ್ಯಾದಿ ಘೋಷಣೆ ಕೂಗಿದರು.