ಜಿಲ್ಲೆ

ಅ.16ರಂದು ಪಿಜಿ ಮಾಲಿಕರ ಜಾಗೃತಿ ಸಮಾವೇಶ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪೇಯಿಂಗ್ ಗೆಸ್ಟ್‌ಗಳನ್ನು (ಪಿಜಿ) ಕಾನೂನು ಪ್ರಕಾರವಾಗಿ ನಡೆಸುವ ನಿಟ್ಟಿನಲ್ಲಿ ಪಿಜಿ ಮಾಲಿಕರಲ್ಲಿ ಅರಿವು ಮೂಡಿಸಲು ಬುಧವಾರ (ಅ.16) ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ಪೊಲೀಸ್ ಇಲಾಖೆ ಹಾಗೂ ಪಾಲಿಕೆಯ ಮಾರ್ಗಸೂಚಿ ಪಾಲನೆ ಮಾಡಿಕೊಂಡು ಪಿಜಿಗಳನ್ನು ನಡೆಸಲಾಗುತ್ತಿದೆ. ಇದನ್ನು ಇನ್ನಷ್ಟು ವ್ಯವಸ್ಥಿತ ರೂಪದಲ್ಲಿ ಮುನ್ನಡೆಸಿಕೊಂಡು ಹೋಗಬೇಕಿದೆ. ಇದಕ್ಕಾಗಿ ಇತ್ತೀಚಿಗೆ ಪಾಲಿಕೆ ಬಿಡುಗಡೆಗೊಳಿಸಿರುವ ಮಾರ್ಗಸೂಚಿಯಲ್ಲಿ ಕೆಲವೊಂದು ಗೊಂದಲಗಳು ಇವೆ. ಇಂತಹ ಸಂದೇಹಗಳನ್ನು ನಿವಾರಿಸಿ ಕಾನೂನು ಪ್ರಕಾರವೇ ಕಾರ್ಯನಿರ್ವಹಿಸಲು ಬಿಬಿಎಂಪಿ ಹಾಗೂ ಪೊಲೀಸ್ ಅಧಿಕಾರಿಗಳು ಸಮಾವೇಶದಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ ಎಂದು ಪಿಜಿ ಮಾಲಿಕರ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷ ಡಿ.ಟಿ.ಅರುಣ್‌ಕುಮಾರ್ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಸಮಾವೇಶವು ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಆಯೋಜಿಸಲಾಗಿದೆ. ಪಿಜಿಗಳ ಮಾರ್ಗಸೂಚಿ ಬಗ್ಗೆ ಪಾಲಿಕೆಯ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಹಾಗೂ ಐಪಿಎಸ್ ನಿವೃತ್ತ ಅಧಿಕಾರಿ ಎಸ್.ಕೆ.ಉಮೇಶ್ ಅವರು ಮಾಗದರ್ಶನ ಮಾಡಲಿದ್ದಾರೆ. ಮಾಜಿ ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ್ ಹಾಗೂ ಪಾಲಿಕೆಯ ಎಂಟೂ ವಲಯಗಳ ಆರೋಗ್ಯ ವಿಭಾಗದ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಅಡ್ಡಿ ಬೇಡ:

ಬೆಂಗಳೂರು ಶೈಕ್ಷಣಿಕ ಕೇಂದ್ರವಾಗಿರುವ ಕಾರಣ ರಾಜ್ಯದ ವಿವಿಧೆಡೆಯಿಂದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಆಗಮಿಸುತ್ತಿದ್ದಾರೆ. ಇವರೊಂದಿಗೆ ಉದ್ಯೋಗಸ್ಥರು ಕೂಡ ಪಿಜಿಗಳಲ್ಲಿ ವಾಸ್ತವ್ಯಹೂಡುತ್ತಿದ್ದಾರೆ. ಇಂತಹವರಿಗೆ ಸೌಲಭ್ಯ ಒದಗಿಸಲು ಪಿಜಿ ವಹಿವಾಡನ್ನು ಸೇವೆ ಎಂದು ಪರಿಗಣಿಸಬೇಕು. ಹೆಚ್ಚು ನಿಯಮಗಳನ್ನು ಹೇರದೆ ಕಾನುನುಬದ್ಧವಾಗಿ ನಡೆಸಲು ಅವಕಾಶವಾಗುವಂತಹ ಜನಸ್ನೇಹಿ ಮಾರ್ಗಸೂಚಿಗಳನ್ನು ಮಾತ್ರ ಪಾಲಿಕೆಯು ಬಿಡುಗಡೆ ಮಾಡಲಿ ಎಂದು ಅರುಣ್‌ಕುಮಾರ್ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಚಂದ್ರಶೇಖರ್, ಮನೀಶ್, ಭಾಸ್ಕರ್ ರೆಡ್ಡಿ, ಅಂಜಯ್ಯ ರೆಡ್ಡಿ ಮತ್ತಿತರರಿದ್ದರು.