ಮಂಡ್ಯ: ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯಲ್ಲಿ ಜಿಲ್ಲೆಯ ಎಲ್ಲ ಹಿಂದುಳಿದ ಸಮುದಾಯಗಳು ಸ್ವಯಂಪ್ರೇರಣೆಯಿಂದ ಪಾಲ್ಗೊಳ್ಳುವಂತೆ ಮಾಡಲು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯಿಂದ ಜಾಗೃತಿ ಅಭಿಯಾನ ನಡೆಸಲಾಯಿತು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಸಮೀಕ್ಷೆಯ ಮಹತ್ವವವನ್ನು ಒಳಗೊಂಡಿರುವ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿ ರಾಜ್ಯ ಸಾರಿಗೆ ಬಸ್‌ಗಳ ಮೇಲೆ ಅಂಟಿಸಿ, ಘೋಷಣೆ ಕೂಗಿ ಜಾಗೃತಿ ಮೂಡಿಸಿದರು. ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, 94 ವರ್ಷದ ಬಳಿಕ ನಡೆಸುತ್ತಿರುವ ಈ ಸಮೀಕ್ಷೆ ಹಿಂದುಳಿದ ವರ್ಗಗಳಿಗೆ ಮಹತ್ವದ್ದಾಗಿದೆ. ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು, ವಿಶೇಷವಾಗಿ ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯ ಮೀಸಲಾತಿಯನ್ನು ಪಡೆದುಕೊಳ್ಳಲು ಹಿಂದುಳಿದ ಸಮಾಜಗಳು ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಸ್ವಾತಂತ್ರ್ಯ ಬಂದು 78 ವರ್ಷ ಕಳೆದಿದ್ದರೂ, ಹಿಂದುಳಿದ ಸಮಾಜಗಳು ಸಂಘಟಿತವಾಗಿ ಒಗ್ಗೂಡಲು ಸಾಧ್ಯವಾಗಿಲ್ಲ. ಸಾಮಾಜಿಕವಾಗಿ ಅತಂತ್ರ ಸ್ಥಿತಿಯನ್ನು ಎದುರಿಸುತ್ತಾ ಶೈಕ್ಷಣಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದುವ ಅಗತ್ಯತೆ ಇದೆ. ಆದ್ದರಿಂದ ಕುಲಕಸುಬು ಅವಲಂಬಿತ ಹಿಂದುಳಿದ ಸಮುದಾಯಗಳು ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ ಗಣತಿದಾರರ ಬಳಿ ವಾಸ್ತವಾಂಶಗಳನ್ನು ಧೈರ್ಯವಾಗಿ ವಿವರಿಸಬೇಕು. ಜತೆಗೆ ತಮ್ಮ ಸಮುದಾಯವನ್ನು ಹೇಳಿಕೊಳ್ಳಬೇಕು ಎಂದು ಹೇಳಿದರು.
ಮೀಸಲಾತಿ ಹೇರಿಕೆ ಸೇರಿದಂತೆ ಹಲವು ಅನುಕೂಲತೆಗಳನ್ನು ಕಲ್ಪಿಸುವ ಉದ್ದೇಶವನ್ನು ಒಳಗೊಂಡಿರುವ ಈ ಸಮೀಕ್ಷೆಯಿಂದ ಹಿಂದುಳಿದ ವರ್ಗಗಳಿಗೆ ಹೆಚ್ಚು ಅನುಕೂಲವಾಗಲಿದೆ. ಪ್ರತಿ ಸಣ್ಣ ಸಣ್ಣ ಸಮುದಾಯಗಳು ತಮ್ಮ ಸಂಖ್ಯಾಬಲವನ್ನು ಪ್ರದರ್ಶಿಸಲು ಮತ್ತು ಭವಿಷ್ಯದಲ್ಲಿ ಜನಸಂಖ್ಯೆಗನುಗುಣವಾಗಿ ಸವಲತ್ತುಗಳನ್ನು ಪಡೆದುಕೊಳ್ಳಲು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಗಿದೆ. ಸಮೀಕ್ಷೆ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದು, ಇದು ಹಿಂದುಳಿದ ವರ್ಗಗಳ ವಿರೋಧಿ ನಡೆಯಾಗಿದೆ. ವಿಶೇಷವಾಗಿ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಹಿಂದುಳಿದ ವರ್ಗಗಳನ್ನು ಎದುರು ಹಾಕಿಕೊಂಡರೆ ಯಾವುದೇ ರಾಜಕೀಯ ಪಕ್ಷಕ್ಕೂ ಉಳಿಗಾಲವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಜಿ.ಪಂ ಮಾಜಿ ಅಧ್ಯಕ್ಷ ಬಿ.ಲಿಂಗಯ್ಯ, ವಿವಿಧ ಹಿಂದುಳಿದ ಸಮುದಾಯಗಳ ಮುಖಂಡರಾದ ಎಂ.ಕೃಷ್ಣ, ಡಿ.ರಮೇಶ್, ವೈರಮುಡಿ, ಜಯರಾಂ, ಸಂತೆಕಸಲಗೆರೆ ಬಸವರಾಜು, ಕರವೇ ಅಶೋಕ್, ಸಿ.ಸಿದ್ದಶೆಟ್ಟಿ, ಮನೋಜ್‌ನಾಯಕ್, ಹುರುಗಲವಾಡಿ ರಾಮಯ್ಯ, ಶೇಷಗಿರಿರಾವ್, ಕಾಂತರಾಜು, ಎಚ್.ಪಿ. ಸತೀಶ್, ಮಂಚಶೆಟ್ಟಿ, ಪುಟ್ಟಸ್ವಾಮಿ, ಪರಮೇಶ್, ರಾಜೇಂದ್ರ ಇತರರಿದ್ದರು.