ಜಿಲ್ಲೆ

ಹೃದಯಾಘಾತ, ಹೃದ್ರೋಗ ತಡೆಗೆ ಜಾಗೃತಿ ಅಗತ್ಯ...

ಖ್ಯಾತ ತಜ್ಞ ಡಾ. ರಂಜನ್​ ಶೆಟ್ಟಿ ಅಭಿಮತ

ತಿಂಗಳಿಗೊಂದು ಅರಿವು ಶಿಬಿರ ಆಯೋಜನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಭಾರತದಲ್ಲಿ ಯುವಸಮುದಾಯ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತ ಮತ್ತು ಹೃದ್ರೋಗಗಳಿಗೆ ತುತ್ತಾಗುತ್ತಿರುವ ಪ್ರಕರಣ ಇತ್ತೀಚೆಗೆ ಹೆಚ್ಚುತ್ತಲೇ ಇದ್ದು ಆತಂಕಕಾರಿ ಬೆಳವಣಿಗೆಯಾಗಿದೆ. ರೋಗ ತಡೆಗಟ್ಟುವುದು, ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು ಮತ್ತು ಆರೋಗ್ಯಕರ ಜೀವನ-ಆಹಾರ ಶೈಲಿ ಅಳವಡಿಸಿಕೊಳ್ಳುವುದರ ಕುರಿತು ಜಾಗೃತಿ ಮೂಡಿಸಬೇಕಾದ ಅಗತ್ಯತೆ ಇದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ. ರಂಜನ್​ ಶೆಟ್ಟಿ ಅಭಿಮತ ವ್ಯಕ್ತಪಡಿಸಿದರು.

ಉಡುಪಿಯ ಪತ್ರಿಕಾ ಭವನದಲ್ಲಿ ಆಗಸ್ಟ್​ 16ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಧಿಕ ಕೊಲೆಸ್ಟ್ರಾಲ್​ ಮತ್ತು ರಕ್ತನಾಳಗಳಲ್ಲಿನ ಅಡಚಣೆಯಂತಹ ಸಮಸ್ಯೆಯಿಂದ ಹೃದಯಾಘಾತ ಅಥವಾ ಹೃದ್ರೋಗ ಬರಬಹುದಾಗಿದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ ಎಂದರು.

ಮುನ್ನೆಚ್ಚರಿಕೆ ಅಗತ್ಯ

ದೇಶದಲ್ಲಿ ಹೃದಯಾಘಾತಕ್ಕೆ ತುತ್ತಾಗುವವರಲ್ಲಿ ಶೇ.50 ಮಂದಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಸಕಾಲಿಕ ಆರೋಗ್ಯ ತಪಾಸಣೆ ಮತ್ತು ಜೀವನಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆ ಮಾಡಿಕೊಂಡರೆ ಶೇ. 80ಕ್ಕಿಂತಲೂ ಹೆಚ್ಚು ಜನರಲ್ಲಿ ಹೃದ್ರೋಗ ತಡೆಯಲು ಸಾಧ್ಯ. 20ರಿಂದ 30 ಅಥವಾ 40ನೇ ವಯಸ್ಸಿನಲ್ಲಿಯೇ ಈ ಮುನ್ನೆಚ್ಚರಿಕಾ ಕ್ರಮ ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಎದುರಾಗಬಹುದಾದ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯದಿಂದ ಪಾರಾಗಬಹುದು ಎಂದರು.

ವೈದ್ಯಕೀಯ ತಂಡದೊಂದಿಗೆ ಅರಿವು ಶಿಬಿರ

ಹೃದಯಾಘಾತದ ಕುರಿತಾಗಿ ಜನರಲ್ಲಿ ಅರಿವು ಮೂಡಿಸಲು ಮುಂದಿನ ದಿನಗಳಲ್ಲಿ ಶಿಬಿರ ಆಯೋಜಿಸಿ ಜನರಿಗೆ ಮಾರ್ಗದರ್ಶನ ಮಾಡುವ ಚಿಂತನೆಯಿದೆ. ತಮ್ಮ ನೇತೃತ್ವದಲ್ಲಿ ವೈದ್ಯಕೀಯ ತಂಡದೊಂದಿಗೆ ಸಾರ್ವಜನಿಕರ ಹೃದ್ರೋಗ ತಪಾಸಣೆ ಹಾಗೂ ಇನ್ನಿತರ ಮೂಲ ಪರೀಕ್ಷೆ ನಡೆಸಲಾಗುವುದು. ಆರೋಗ್ಯಕರ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ, ಒತ್ತಡ ನಿರ್ವಹಣೆಯ ಕುರಿತು ತಜ್ಞರಿಂದ ಸಮಾಲೋಚನೆ ಹಾಗೂ ಸಲಹೆ ನೀಡಲಾಗುವುದು. ಹೃದ್ರೋಗದ ಆರಂಭಿಕ ಲಕ್ಷಣ, ತಡೆಗಟ್ಟುವ ವಿಧಾನಗಳ ಕುರಿತು ಈಗಾಗಲೇ ಉಡುಪಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಡಾ. ರಂಜನ್​ ತಿಳಿಸಿದರು. ಯುವಜನರು ತಮ್ಮ ಹೃದಯದ ಆರೋಗ್ಯದ ಬಗ್ಗೆ ಸ್ವತಃ ಹೊಣೆಗಾರಿಕೆ ವಹಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದೆಂದೂ ಸರಿಪಡಿಸಲು ಆಗದಂತಹ ಹಾನಿ ಸಂಭವಿಸುವ ಮುನ್ನವೇ ತಮ್ಮ ಜೀವನಶೈಲಿಯಲ್ಲಿ ಆರೋಗ್ಯಕರ ಬದಲಾವಣೆ ಮಾಡಿಕೊಳ್ಳಬೇಕು. 20ನೇ ವಯಸ್ಸಿನಿಂದಲೇ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. | ಡಾ. ರಂಜನ್​ ಶೆಟ್ಟಿ. ಹೃದ್ರೋಗ ತಜ್ಞ