ಜಗಳೂರು: ದೇವರಲ್ಲಿ ಭಕ್ತಿ ಇರಲಿ, ಮೌಢ್ಯ ಬೇಡ. ಅನಿಷ್ಟ ಪದ್ಧತಿಗಳಿಗೆ ಪರಿಶಿಷ್ಟ ವರ್ಗದವರೇ ಹೆಚ್ಚಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಶಾಸಕ ಬಿ. ದೇವೇಂದ್ರಪ್ಪ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಚಿಕ್ಕಬಂಟನಹಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರತಿಭಾ ವಿಕಾಸ ವೇದಿಕೆಯಲ್ಲಿ ಗುರುವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ದಾವಣಗೆರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಜಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ದೇವದಾಸಿ ಸಮರ್ಪಣೆ ನಿಷೇಧ ಜಾಗೃತಿ ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೆತ್ತಲೆ ಸೇವೆ, ಮುತ್ತು ಕಟ್ಟುವುದು, ದೇವದಾಸಿ ಪದ್ಧತಿ, ಹರಕೆ, ಬಲಿ ನೀಡುವುದು, ಬಾಯಿ ಬೀಗ ಇಂತಹ ಅನೇಕ ಅನಿಷ್ಟ ಪದ್ಧತಿಗಳನ್ನು ದೇವರ ಹೆಸರಲ್ಲಿ ನಂಬಿಸಿ ಮೌಢ್ಯ ಉಂಟು ಮಾಡಿದ್ದಾರೆ. ಈ ಪಿಡುಗನ್ನು ದೂರ ಮಾಡಲು ಶಿಕ್ಷಣದಿಂದ ಮಾತ್ರ ಸಾಧ್ಯ. ಬಾಲ್ಯ ವಿವಾಹ ಕಾನೂನು ಬಾಹಿರ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಂತಹ ಪದ್ಧತಿ ಬಗ್ಗೆ ಹಳ್ಳಿಗಳಲ್ಲಿ ನಿತ್ಯ ಜಾಗೃತಿ ಮೂಡಿಸುವುದು ಅಗತ್ಯ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಕೆ.ಎಸ್. ರಾಜಾನಾಯ್್ಕ ಮಾತನಾಡಿ, ತಾಲೂಕಿನಲ್ಲಿ 284 ಜನ ದೇವದಾಸಿಯರಿದ್ದು, ಪ್ರಸ್ತುತ 174ಕ್ಕೆ ಸಂಖ್ಯೆ ಇಳಿದಿದೆ. ಅವರಿಗೆ ಪ್ರತಿ ತಿಂಗಳು 2 ಸಾವಿರ ರೂ. ಸಹಾಯಧನ, ನಿವೇಶನ ಕಲ್ಪಿಸಿದ್ದೇವೆ. ಇಂತಹ ಪದ್ಧತಿ ಆಚರಿಸಿದರೆ ಕಠಿಣ ಕಾರಾಗೃಹ ಶಿಕ್ಷೆಯ ಜತೆಗೆ ದಂಡ ವಿಧಿಸುವ ಕಾನೂನು ಇದೆ ಎಂದರು.
ನಿವೃತ್ತ ಉಪನ್ಯಾಸಕ ಷಾಂಷುದ್ದೀನ್ ಮಾತನಾಡಿ, ಅನಿಷ್ಟ ಪದ್ಧತಿಗಳನ್ನು ಸಂಪೂರ್ಣ ತೊಲಗಿಸಬೇಕು. ಎಲ್ಲರೂ ಜಾಗೃತರಾಗಿ ಹೆಣ್ಣನ್ನು ಶೋಷಣೆ ಮುಕ್ತರನ್ನಾಗಿಸುವುದು ಅಗತ್ಯವಾಗಿದೆ ಎಂದರು.
ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ. ಮಹೇಶ್ವರಪ್ಪ ಮಾತನಾಡಿ, ದೇವದಾಸಿಯರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಅನಿಷ್ಟ ಪದ್ಧತಿಯನ್ನು ತಾಲೂಕಿನಲ್ಲಿ ನಿಮೂಲನೆ ಮಾಡುವುದಕ್ಕೆ ಕೈಜೋಡಿಸಬೇಕು ಎಂದರು.
ಸೊಕ್ಕೆ ಗ್ರಾಪಂ ಉಪಾಧ್ಯಕ್ಷೆ ಚೌಡಮ್ಮ, ಮಾಜಿ ಅಧ್ಯಕ್ಷ ತಿರುಮಲಾ, ತಾಪಂ ಇಒ ಕೆಂಚಪ್ಪ, ಸದಸ್ಯರಾದ ರಾಜಣ್ಣ, ಪಾಪಣ್ಣ, ಗೋವಿಂದಪ್ಪ, ಕಮಲಮ್ಮ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಪ್ರಾಂಶುಪಾಲ ಮಹಾಂತೇಶ್, ಪಿಡಿಒ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಪಂಗಡಗಳ ಅಧಿಕಾರಿ ಮಂಜುನಾಥ್ ಮತ್ತಿತರರಿದ್ದರು.