ಜಿಲ್ಲೆ

ಮನಕ್​ ಮಂಥನ್​, ಸಂವಾದ ಕಾರ್ಯಕ್ರಮದಲ್ಲಿ ಗುಣಮಟ್ಟ ಮಾನದಂಡ ಬಗ್ಗೆ ಅರಿವು

ಬೆಂಗಳೂರು:ಭಾರತೀಯ ಮಾನಕ್​ ಬ್ಯುರೋ (ಬಿಐಎಸ್​) ಬೆಂಗಳೂರು ಶಾಖೆ, ಮಂಗಳವಾರ ನಗರದಲ್ಲಿ ಆಯೋಜಿಸಲಾಗಿದ್ದ "ಮನಕ್​ ಮಂಥನ್​' ಮತ್ತು "ಮನಕ್​ ಸಂವಾದ' ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊಂಡಿತ್ತು. ಮಾನದಂಡಗಳ ಸೂತ್ರೀಕರಣ, ಪರಿಷ್ಕರಣೆ ಮತ್ತು ಅನುಷ್ಠಾನದಲ್ಲಿ ಉದ್ಯಮ ಒಳಗೊಳ್ಳುವಿಕೆ ಬಲಪಡಿಸುವ ಗುರಿಯನ್ನು ಈ ಉಪಕ್ರಮ ಹೊಂದಿತ್ತು.

ಬಿಐಎಸ್​ ಬೆಂಗಳೂರು ಶಾಖಾ ಕಚೇರಿ ನಿರ್ದೇಶಕಿ ಎಂ.ಸುಷ್ಮಾರಾವ್​ ಮಾತನಾಡಿ, ಗುಣಮಟ್ಟ ಚಾಲಿತ ಪರಿಸರ ವ್ಯವಸ್ಥೆ ರೂಪಿಸುವಲ್ಲಿ ಮಾನದಂಡಗಳ ಪಾತ್ರ ನಿರ್ಣಾಯಕವಾಗಿದೆ ಎಂದರು. ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿದರು.

ಬಿಐಎಸ್​ ಬೆಂಗಳೂರು ಶಾಖಾ ಕಚೇರಿಯ ಜಂಟಿ ನಿರ್ದೇಶಕ ಕೆ.ರಾಜಶೇಖರ್​ ಮಾತನಾಡಿ, ನಮ್ಮ ಸಂಸ್ಥೆ, ಪ್ಯಾಕಿಂಗ್​ ಮೇಲೆ ಐಎಸ್​ಐ ಗುರುತು, ಸಂಸ್ಕರಣೆ, ವಿತರಣೆ, ಸಾಗಣೆ ಹಾಗೂ ಗುಣಮಟ್ಟ ಮಾನದಂಡಗಳ ಸುರಕ್ಷತೆ ಕುರಿತು ಅರಿವು ಮೂಡಿಸುತ್ತಿದೆ.ತಯಾರಿಕಾ ಕಂಪನಿಗಳು ಕಡ್ಡಾಯವಾಗಿ ಬಿಐಎಸ್​ ಪರವಾನಗಿ ಪಡೆದು ಉತ್ಪನ್ನ ತಯಾರಿಸಬೇಕು. ಗ್ರಾಹಕರ ರಕ್ಷಣೆಯೇ ನಮ್ಮ ಗುರಿ ಎಂದು ಹೇಳಿದರು.

ಪರವಾನಗಿ ನಿಯಮ, ಪ್ರಮಾಣಿತ ಗುರುತುಗಳ ಕಾನೂನುಬದ್ಧ ಬಳಕೆ, ಕಾರ್ಯಾಚರಣೆಯ ಮಾರ್ಗಸೂಚಿಗಳಲ್ಲಿನ ಇತ್ತೀಚಿನ ನವೀಕರಣ, ಪರೀಕ್ಷಾ ವರದಿಗಳು ಸಕಾಲಿಕ ಸಲ್ಲಿಕೆ, ತಪಾಸಣೆಗಳಿಗೆ ತಯಾರಿ, ಆನ್​ಲೈನ್​ ಬಳಕೆ ಸೇರಿ ಬಿಐಎಸ್​ ಕಾರ್ಯಾಚರಣೆಗಳ ಅವಲೋಕವನ್ನು ಪ್ರಸ್ತುತಪಡಿಸಲಾಯಿತು.

ಈ ವೇಳೆ ಪರಸ್ಪರ ಸಹಯೋಗ ಬಲಪಡಿಸಲು ಪಾಲುದಾರರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಬಿಐಎಸ್​ ವಿಜ್ಞಾನಿ ನರೇಂದರ್​ ರೆಡ್ಡಿ ಬೀಸು ಸೇರಿ ವಿವಿಧ ವಲಯಗಳ ಪಾಲುದಾರರು ಭಾಗಿಯಾಗಿದ್ದರು.