ಜಿಲ್ಲೆ

ತಳಸಮುದಾಯದ ಏಳಿಗೆಗೆ ಶ್ರಮಿಸಿದವರಿಗೆ ಪ್ರಶಸ್ತಿ ಪ್ರದಾನ

ಮೈಸೂರು: ಜಿಲ್ಲಾ ಬಿಸಿಎಂ ಹಿರಿಯ ವಿದ್ಯಾರ್ಥಿಗಳ ಸಂಘ ಪ್ರಥಮ ವರ್ಷದ ವಾರ್ಷಿಕೋತ್ಸವದಲ್ಲಿ ತಳಸಮುದಾಯದ ಜನರ ಏಳಿಗೆಗೆ ಶ್ರಮಿಸಿದ ಹಿರಿಯರನ್ನು ಗುರುತಿಸಿ ದೇವರಾಜ ಅರಸು, ಹಾವನೂರು ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಜಿಲ್ಲಾ ಬಿಸಿಎಂ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ತಿಳಿಸಿದರು.

ನಗರದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ ಕೊನೇ ವಾರ ಅಥವಾ ನವೆಂಬರ್ ತಿಂಗಳ ಮೊದಲ ವಾರದಲ್ಲಿ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು.

ಕರ್ನಾಟಕದಲ್ಲಿ ಉನ್ನತ ಶಿಕ್ಷಣದ ಬೆಳವಣಿಗೆಗೆ ವಸತಿ ನಿಲಯಗಳ ಮಹತ್ವ ಮತ್ತು ಪ್ರಾಮುಖ್ಯದ ಬಗ್ಗೆ ವಿಚಾರ ಸಂಕಿರಣ ನಡೆಯಲಿದೆ. ದೇವರಾಜ ಅರಸು ಮತ್ತು ಎಲ್.ಜಿ. ಹಾವನೂರ ಜೀವನ ಚರಿತ್ರೆಯ ಬಗ್ಗೆ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಸಂಘದ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಲಾಗುವುದು ಎಂದರು.

ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಗುವುದು. ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಬಿಸಿಎಂ ಹಾಸ್ಟೆಲ್ ಅಡುಗೆ ಸಿಬ್ಬಂದಿಯನ್ನು ಅಭಿನಂದಿಸಲಾಗುವುದು. ಇದಕ್ಕೆಲ್ಲ ಹಿರಿಯ ವಿದ್ಯಾರ್ಥಿಗಳ ಸಹಕಾರ, ನೆರವು, ಸಲಹೆ ನೀಡಬೇಕು ಎಂದು ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷ ಹಾಗೂ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಆರ್.ಮಹಾದೇವ ಮಾತನಾಡಿ, ಎಲ್ಲರೂ ಒಗ್ಗಟ್ಟಿನಿಂದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಬೇಕು ಎಂದರು.

ಸಂಘದ ಕಾರ್ಯದರ್ಶಿ ರಾಜೇಶ್‌ಗೌಡ, ಸಂಘಟನಾ ಕಾರ್ಯದರ್ಶಿ ರಮೇಶ್‌ಗೌಡ, ಖಜಾಂಚಿ ರುಕ್ಮಾಂಗದ, ಅಹಿಂದ ಜವರಪ್ಪ, ಸದಸ್ಯರು ಇದ್ದರು.