ಯಳಂದೂರು: ತಾಲೂಕಿನ ಸುಂದರಮ್ಮ ದುಗ್ಗಹಟ್ಟಿ ಪಿ.ವೀರಭದ್ರಪ್ಪ ಪ್ರತಿಷ್ಠಾನದಿಂದ ಸುತ್ತೂರಿನಲ್ಲಿ ನಡೆದ ಜಾತ್ರೆಯಲ್ಲಿ ಚಾಮರಾಜನಗರ ಜಿಲ್ಲೆಯ ರೈತರಿಗೆ ಕೃಷಿಕ ಪ್ರಶಸ್ತಿ ನೀಡಲಾಯಿತು.
ಸುತ್ತೂರಿನಲ್ಲಿ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸುಸ್ಥಿರ ಕೃಷಿಗಾಗಿ ನಿಖರ ಬೇಸಾಯ ಕ್ರಮ ಕುರಿತಾದ ವಿಚಾರ ಸಂಕಿರಣದಲ್ಲಿ ಕೃಷಿಕ ಪ್ರಶಸ್ತಿ ವಿತರಿಸಲಾಯಿತು.
2004ರಿಂದ ಈ ಪ್ರಶಸ್ತಿಯನ್ನು ಪ್ರತಿ ವರ್ಷವೂ ಸುತ್ತೂರು ಜಾತ್ರೆಯಲ್ಲಿ ನೀಡುವ ವಾಡಿಕೆ ಇದೆ. ತಾಲೂಕಿನ ದುಗ್ಗಹಟ್ಟಿ ಗ್ರಾಮದ ಸುಂದರಮ್ಮ ದುಗ್ಗಹಟ್ಟಿ ಪಿ.ವೀರಭದ್ರಪ್ಪ ಪ್ರತಿಷ್ಠಾನದ ವತಿಯಿಂದ ಪ್ರಶಸ್ತಿ ನೀಡಲಾಗುತ್ತದೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಅತ್ಯುತ್ತಮ ಸಾಧನೆಗೈದ ರೈತರಿಗೆ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ಬಾಳೆ ಬೆಳೆಯಲ್ಲಿ ಯಳಂದೂರು ತಾಲೂಕಿನ ಮಲಾರಪಾಳ್ಯ ಗ್ರಾಮದ ಸುಧಾಮಣಿ ಹಾಗೂ ಮಲ್ಲಿಗೆಹಳ್ಳಿ ಗ್ರಾಮದ ಪ್ರಭುಸ್ವಾಮಿ, ಮುಸುಕಿನ ಜೋಳ ಬೆಳೆಯಲ್ಲಿ ಹನೂರು ತಾಲೂಕಿನ ಮಂಗಲ ಗ್ರಾಮದ ಮಂಗಳಮ್ಮ, ಕಂಡಯ್ಯನ ಪಾಳ್ಯದ ಗೋವಿಂದೇಗೌಡ, ಟೊಮ್ಯಾಟೋ ಬೆಳೆಯಲ್ಲಿ ಚಾಮರಾಜನಗರ ತಾಲೂಕಿನ ಬಸವಾಪುರ ಗ್ರಾಮದ ಬಸವಣ್ಣ ನಾಯಕ, ಕಲ್ಪುರ ಗ್ರಾಮದ ಕೆ.ಎ.ರೇವಣ್ಣ , ಕಬ್ಬು ಬೆಳೆಯಲ್ಲಿ ಕೊಳ್ಳೇಗಾಲದ ಬಾಬುಪಾಷ ಹಾಗೂ ಕುಂತೂರು ಗ್ರಾಮದ ರಾಜೇಂದ್ರಪ್ರಸಾದ್, ಪೋಲ್‌ಬೀನ್ಸ್ ಬೆಳೆಗೆ ಗುಂಡ್ಲುಪೇಟೆ ತಾಲೂಕಿನ ಯರಿಯೂರು ಗ್ರಾಮದ ಪ್ರಕಾಶ್, ಮಂಚಹಳ್ಳಿ ಗ್ರಾಮದ ಕಾಳಸ್ವಾಮಿ ಎಂಬುವವರಿಗೆ ಪ್ರಶಸ್ತಿ ವಿತರಿಸಲಾಯಿತು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ ಪ್ರಶಸ್ತಿ ವಿತರಣೆ ಮಾಡಿದರು. ಶ್ರೀ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶ್ರೀ ಸೋಮಶೇಖರ ಶಿವಾಚಾರ್ಯಸ್ವಾಮೀಜಿ, ಮಾಜಿ ಸಚಿವರಾದ ಬಿ.ಸಿ.ಪಾಟೀಲ್, ಸಿ.ಸಿ.ಪಾಟೀಲ್, ಅರವಿಂದ ಬೆಲ್ಲದ್, ಡಾ. ಕುಮಾರ್ ದುಗ್ಗಹಟ್ಟಿ ಪಿ. ೀರಭದ್ರಪ್ಪ ಪ್ರತಿಷ್ಠಾನದ ವಿ.ಗಂಗಾಧರಸ್ವಾಮಿ ಇದ್ದರು.