ಜಿಲ್ಲೆ

ರೈಲ್ವೆ ಸಪ್ತಾಹ ಆಚರಣೆಯಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯದ ವತಿಯಿಂದ ಇಲ್ಲಿನ ರೈಲ್ವೆ ಆಪೀಸರ್ಸ್​ ಕ್ಲಬ್​ನಲ್ಲಿ ಸೋಮವಾರ ಆಯೋಜಿಸಿದ್ದ 69ನೇ ರೈಲ್ವೆ ಸಪ್ತಾಹ ಆಚರಣೆ ಸಮಾರಂಭದಲ್ಲಿ ವಿಶೇಷ ಸೇವೆಗೈದ ಸಿಬ್ಬಂದಿಗೆ ವಿಶಿಷ್ಟ ರೈಲ್​ ಸೇವಾ ಪುರಸ್ಕಾರ-2024 ಹಾಗೂ ರೈಲ್​ ಸೇವಾ ಪುರಸ್ಕಾರ-2024 ಅನ್ನು ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಅವರು ಪ್ರದಾನ ಮಾಡಿದರು.

42 ಸಿಬ್ಬಂದಿ ವಿಶಿಷ್ಟ ರೈಲ್​ ಸೇವಾ ಪುರಸ್ಕಾರ ಹಾಗೂ 21 ಸಿಬ್ಬಂದಿ ರೈಲ್​ ಸೇವಾ ಪುರಸ್ಕಾರ ಪಡೆದುಕೊಂಡರು.

ನೈಋತ್ಯ ರೈಲ್ವೆಯ ವಿವಿಧ ವಿಭಾಗಗಳು, ನಿಲ್ದಾಣಗಳು ಮತ್ತು ವರ್ಕ್​ಶಾಪ್​ಗಳಿಗೆ ಅವುಗಳ 2024ನೇ ವರ್ಷದ ಸಾಧನೆಗಳ ಆಧಾರದ ಮೇಲೆ ದಕ್ಷತಾ ಪದಕಗಳನ್ನು ಪ್ರದಾನ ಮಾಡಲಾಯಿತು.

ಮೈಸೂರು ಮತ್ತು ಬೆಂಗಳೂರು ವಿಭಾಗಗಳು ಸಮಗ್ರ ವೀರಾಗ್ರಣಿ ಪ್ರಶಸ್ತಿ ಹಂಚಿಕೊಂಡವು.

ಉತ್ತಮ ನಿರ್ವಹಣಾ ದೊಡ್ಡ ನಿಲ್ದಾಣ ಪ್ರಶಸ್ತಿಯನ್ನು ಬೆಂಗಳೂರು ವಿಭಾಗದ ಬೆಂಗಳೂರಿನ ಸರ್​ ಎಂ. ವಿಶ್ವೇಶ್ವರಯ್ಯ ರ್ಟಮಿನಲ್​, ಉತ್ತಮ ನಿರ್ವಹಣಾ ಚಿಕ್ಕ ನಿಲ್ದಾಣ ಪ್ರಶಸ್ತಿಯನ್ನು ಹುಬ್ಬಳ್ಳಿ ವಿಭಾಗದ ಸುಳಧಾಳ ರೈಲು ನಿಲ್ದಾಣ ಪಡೆದುಕೊಂಡವು.

ತರಬೇತಿ ಸಿಬ್ಬಂದಿ ಉತ್ತಮ ಸಾಧನೆ ಪ್ರಶಸ್ತಿಯನ್ನು ಮೈಸೂರು ಮತ್ತು ಬೆಂಗಳೂರು ವಿಭಾಗಗಳು ಜಂಟಿಯಾಗಿ ಪಡೆದುಕೊಂಡವು. ಉತ್ತಮ ನಿರ್ವಹಣಾ ರನ್ನಿಂಗ್​ ರೂಮ್​ ಪ್ರಶಸ್ತಿಯನ್ನು ಬೆಂಗಳೂರು ವಿಭಾಗದ ಎಸ್​ಎಂವಿಬಿ ರನ್ನಿಂಗ್​ ರೂಮ್​ ಪಡೆದುಕೊಂಡರೆ, ಉತ್ತಮ ನಿರ್ವಹಣೆ ಲೋಕೊ ಶೆಡ್​ ಪ್ರಶಸ್ತಿಯನ್ನು ಹುಬ್ಬಳ್ಳಿ ವಿಭಾಗದ ಡಿಸೈಲ್​ ಲೋಕೋ ಶೆಡ್​ ಪಡೆದುಕೊಂಡಿತು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅರವಿಂದ ಶ್ರೀವಾಸ್ತವ, ನೈಋತ್ಯ ರೈಲ್ವೆ ವಲಯದ ಸಿಬ್ಬಂದಿಯ ಪ್ರಾಮಾಣಿಕ ಕಾರ್ಯನಿರ್ವಹಣೆಯಿಂದಾಗಿ ಹಲವಾರು ಅತ್ಯುತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ಅಪರ ಪ್ರಧಾನ ವ್ಯವಸ್ಥಾಪಕ ಕೆ.ಎಸ್​. ಜೈನ್​, ಎಸ್​ಡಬ್ಲುಆರ್​ ಮಹಿಲಾ ಕಲ್ಯಾಣ ಸಂಸ್ಥೆಯ ನಮಿತಾ ಶ್ರೀವಾಸ್ತವ, ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.