ತುಮಕೂರು: ಅನಕ್ಷರಸ್ಥರ ವಿಶ್ವವಿದ್ಯಾಲಯ ಎನ್ನಿಸಿರುವ ರಂಗಭೂಮಿ ಕಲೆ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶನಿವಾರ ಕರ್ನಾಟಕ ನಾಟಕ ಅಕಾಡೆಮಿ ಹಮ್ಮಿಕೊಂಡಿದ್ದ 2019-20ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಂಗಭೂಮಿ ಬಹುದೊಡ್ಡ ಮಾಧ್ಯಮವಾಗಿದ್ದು, ಬದುಕಿನ ಶಿಕ್ಷಣ ಕೊಡುವಲ್ಲಿ ಮತ್ತು ಜೀವನವನ್ನು ವಿಕಾಸಗೊಳಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದರು.
ಅರ್ಜಿ ಹಾಕಿ ಪ್ರಶಸ್ತಿ ಪಡೆದುಕೊಳ್ಳಬಾರದು, ಪ್ರಶಸ್ತಿಗಳೇ ನಮ್ಮನ್ನು ಹುಡುಕಿಕೊಂಡು ಬಂದಾಗ ಆ ಪ್ರಶಸ್ತಿಯ ಗೌರವ ಹೆಚ್ವುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಉತ್ತಮ ಹೆಜ್ಜೆ ಇಟ್ಟಿದೆ, ಕಲೆ ಮತ್ತು ಕಲಾವಿದರ ಬೆಳವಣಿಗೆಗೆ ಅಕಾಡೆಮಿ ಮತ್ತು ಸರ್ಕಾರ ಹೆಚ್ಚು ಒತ್ತು ನೀಡಿ,
ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡಬೇಕು, ಕಲಾವಿದರ ಮಾಸಾಶನ ಹೆಚ್ಚಿಸಬೇಕು ಎಂದರು.
ನಾಟಕ ಅಕಾಡಮಿ 1,750 ರಿಂದ 1,800 ಪ್ರಶಸ್ತಿ ನೀಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದೆ. ಗುಬ್ಬಿ ವೀರಣ್ಣ ಅವರ ರಂಗಭೂಮಿಯಿಂದಾಗಿ ನಾಡಿನ ಹಿರಿಮೆ ಜಗದಗಲ ಪಸರಿಸಿದ್ದು, ಗುಬ್ಬಿ ಕಂಪನಿ ಅನೇಕರಿಗೆ ವಿಶ್ವವಿದ್ಯಾನಿಲಯವಾಗಿದೆ. ಟಿವಿ, ಮಾಧ್ಯಮಗಳಿಲ್ಲದಿದ್ದ ಕಾಲದಲ್ಲೂ ನಾಟಕ ಪರಂಪರೆ ಸಾಕಷ್ಟು ಎತ್ತರಕ್ಕೆ ಬೆಳೆದಿದೆ ಎಂದು ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಬಿ.ವಿ.ರಾಜಾರಾಂ ಬಣ್ಣಿಸಿದರು.
ಇತ್ತೀಚಿನ ದಿನಗಳಲ್ಲಿ ಕಲಾವಂತಿಕೆ ಮಾಯವಾಗುತ್ತಿದ್ದು, ಕಲೆಯನ್ನು ಬೆಳೆಸುವ ಕೆಲಸವಾಗಬೇಕು ಎಂದು ಮೇಯರ್ ಫರೀಧಾ ಬೇಗಂ ಸಲಹೆ ನೀಡಿದರು. ನಾಟಕ ಅಕಾಡೆಮಿ ಸದಸ್ಯ ಟಿ.ಎಸ್. ಸದಾಶಿವಯ್ಯ, ಜಿಲ್ಲಾ ಪೌರಾಣಿಕ ನಾಟಕ ಕಲಾವೃಂದದ ಭೀಮಣ್ಣ ತಂಡದವರು ಕಾರ್ಯಕ್ರಮಕ್ಕೂ ಮುನ್ನ ರಂಗಗೀತೆ ನಡೆಸಿಕೊಟ್ಟರು.
ಪ್ರಶಸ್ತಿ ಪುರಸ್ಕೃತ ಸಾಧಕರು: ಕರ್ನಾಟಕ ನಾಟಕ ಅಕಾಡೆಮಿ 2019-20ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಜಿ.ವಿ.ಶಾರದ ಅವರಿಗೆ ಪ್ರದಾನ ಮಾಡಲಾಯಿತು. ನಾಗೇಂದ್ರ ಶಾ, ಕೆ.ಪಿ.ಪ್ರಕಾಶ್, ಡಾ.ಎಂ.ಬೈರೇಗೌಡ, ಮಂಜುಳಾ ಮಂಜುನಾಥ್, ಮಾಲೂರು ಸಿದ್ದಪ್ಪ, ಕೆ.ಜಂಬುನಾಥ, ಸಿದ್ದಲಿಂಗಪ್ಪ, ಭಾಸ್ಕರ್ ಮಣಿಪಾಲ, ಪ್ರೊ.ಎಂ.ಎಸ್. ವೇಣುಗೋಪಾಲ್, ಬಿ.ನಾಗರಾಗೌಡ, ಪಿ.ಶಾಡ್ರಾಕ್, ವಿಯಯ್ ಕುಮಾರ್ ಕೊಡಿಯಾಲ್ ಬೈಲು, ಪರಮೇಶ್ವರ ಲೆಂಡೆ, ಗುರುನಾಥಪ್ಪ ಉಂಗುರಶೆಟ್ಟಿ ಕೋಟೆ, ರಮೇಶ್ ಹಂಚಿನಮನಿ, ಬಸವರಾಜ ಹೆಸರೂರು, ಮಧುಕುಮಾರ, ಹರಿಜನ, ಬಿ.ಎನ್.ಶಶಿಕಲಾ, ಬಿ.ಎಲ್.ರವಿಕುಮಾರ್, ಸಿ.ಎಸ್‌ಪಾಟೀಲ ಕುಲಕರ್ಣಿ, ಝಕೀರ್ ನದಾಫ್, ಶಾಂತಮ್ಮ ಬಿ.ಮಲಕಲ್ಲ, ಸಂಗಮೇಶ ದೇವೇಂದ್ರ ಬದಾಮಿ, ಶಶಿಪ್ರಭಾ ಆರಾಧ್ಯ, ಗಣಪತಿ ಬಿ. ಹೆಗಡೆ ಅವರಿಗೆ ವಾರ್ಷಿಕ ಪ್ರಶಸ್ತಿ ಹಾಗೂ ಗವೀಶ ವೀರಭದ್ರಯ್ಯ ಹಿರೇಮಠ ಅವರಿಗೆ ಪುಸ್ತಕ ಬಹುಮಾನ ನೀಡಲಾಯಿತು. ಕಲ್ಚರ್ ಕಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರಕ್ಕೆ ಬಿ.ಮಲ್ಲಿಕಾರ್ಜುನ, ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿನಿಧಿ ಪುರಸ್ಕಾರ ಕೊಟ್ಟೂರು ಕೋಮಲಮ್ಮ, ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ ನಾಮದೇವ ನೂಲಿ, ಕೆ.ರಾಮಚಂದ್ರಯ್ಯ ದತ್ತಿನಿಧಿ ಪುರಸ್ಕಾರ ಅರವಿಂದ ಕುಲಕರ್ಣಿ ಅವರಿಗೆ ಪ್ರದಾನ ಮಾಡಲಾಯಿತು.
ಅಕಾಡೆಮಿ ಸ್ಥಾಪನೆಯೂ ಒಂದು: ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಹಿತ್ಯಿಕ ಪರಂಪರೆಗಳನ್ನು ಉಳಿಸಿ ಬೆಳೆಸುವಲ್ಲಿ ಸರ್ಕಾರದ ಪಾತ್ರ ಗುರುತರವಾಗಿದೆ. ಕಲೆ, ಸಂಸ್ಕೃತಿಯನ್ನು ಕಾಪಾಡಲು, ಪ್ರದರ್ಶನ ಕಲೆಗಳನ್ನು ಅಭಿವೃದ್ಧಿಪಡಿಸಲು ಸದಾ ಸಿದ್ಧವಾಗಿರುವ ರಾಜ್ಯ ಸರ್ಕಾರ ಪ್ರತಿಯೊಂದು ಕಲಾಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ರೂಪಿಸಿದ ಯೋಜನೆಯಲ್ಲಿ ಅಕಾಡೆಮಿ ಸ್ಥಾಪನೆಯೂ ಒಂದಾಗಿದೆ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು. ಹಿಮಾಲಯದಷ್ಟು ಸಾಧನೆ ಮಾಡಿದ ನಾಟಕಕಾರರು ಕರ್ನಾಟಕ ರಾಜ್ಯದಲ್ಲಿದ್ದಾರೆ, ಪ್ರಶಸ್ತಿ ಪ್ರದಾನದಿಂದ ಪ್ರಶಸ್ತಿಗೆ ಭಾಜನರಾದವರ ಕಲಾ ಕ್ಷೇತ್ರದಲ್ಲಿನ ಸೇವೆ ಪರಿಪೂರ್ಣಗೊಳ್ಳುತ್ತದೆ ಎಂದು ಸಂಸದರು ಹೇಳಿದರು.
ಕಲೆ, ಸಂಸ್ಕೃತಿ, ಪರಂಪರೆಗೆ ಸರ್ಕಾರಗಳು ಪ್ರೋತ್ಸಾಹ ನೀಡುತ್ತಿವೆ, ಕಲಾವಿದರಿಗಾಗಿ ಸಾಕಷ್ಟು ಕೆಲಸ ಮಾಡುತ್ತಿವೆೆ, ಕಾಲ ಕಾಲಕ್ಕೆ ಸಂಘ ಸಂಸ್ಥೆಗಳಿಗೆ ಸಹಾಯ ಮಾಡುತ್ತಿದೆ. ಆದರೆ, ಸರ್ಕಾರ ಕಲಾವಿದರನ್ನು ಸೃಷ್ಟಿಸಲು ಸಾಧ್ಯವಿಲ್ಲ. ಕಲಾವಿದರು ಸಮಾಜದಿಂದ ಉದ್ಭವಿಸುತ್ತಾರೆ. ಪ್ರೊ.ಆರ್. ಭೀಮಸೇನ್ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ