ಮಂಡ್ಯ: ಹಲವು ವಿಶೇಷತೆಗಳಿಂದಲೇ ಮಾದರಿಯಾಗಿರುವ ಮಂಡ್ಯ ದಕ್ಷಿಣ ವಲಯ ವ್ಯಾಪ್ತಿಗೆ ಉಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆ ಪ್ರಸಕ್ತ ಸಾಲಿನ ಮಾಜಿ ಸಚಿವ ಎಚ್.ಜಿ.ಗೋವಿಂದೇಗೌಡ ಹೆಸರಿನಲ್ಲಿ ಕೊಡಮಾಡುವ ಉತ್ತಮ ಶಾಲಾ ಪ್ರಶಸ್ತಿಗೆ ಆಯ್ಕೆಯಾಗಿದೆ.
ಮೈಸೂರು ವಿಭಾಗದಲ್ಲಿ ನಡೆದ ಆಯ್ಕೆಯಲ್ಲಿ ಹಲವು ಶಾಲೆಗಳನ್ನು ಹಿಂದಿಕ್ಕಿ ಉಮ್ಮಡಹಳ್ಳಿ ಸ್ಕೂಲ್‌ಗೆ ಅತ್ಯುತ್ತಮ ಎನಿಸಿಕೊಂಡಿದೆ. ಇದರಿಂದ ಶಾಲೆಗೆ 2.75 ಲಕ್ಷ ರೂ ನಗದು ಬಹುಮಾನ ಸಿಗಲಿದೆ. ಅಂತೆಯೇ ಸೆ.5ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
1994ರಲ್ಲಿ ಪ್ರಾರಂಭವಾದ ಈ ಶಾಲೆ ಸಾಕಷ್ಟು ಪೈಪೋಟಿಯನ್ನು ಖಾಸಗಿ ಸಂಸ್ಥೆಗಳಿಗೆ ನೀಡಿದೆ. ಪ್ರತಿ ವರ್ಷವೂ ಹಾಜರಾತಿ ಹೆಚ್ಚಿಸಿಕೊಳ್ಳುವ ಮೂಲಕ ಈಗ ಸದೃಢವಾಗಿದೆ. 2022-21ನೇ ಸಾಲಿಗೆ ಬರುವ ಹೊತ್ತಿಗೆ 58ಕ್ಕೆ ಬಂದಿತು. 2021-22ರಲ್ಲಿ 70, 2022-23ರಲ್ಲಿ 80, 2023-24ರಲ್ಲಿ 105 ಹಾಗೂ 2024-25ರಲ್ಲಿ 106 ಮಕ್ಕಳು ದಾಖಲಾತಿ ಪಡೆದುಕೊಂಡಿದ್ದಾರೆ. ಈ ಪೈಕಿ 53 ಹೆಣ್ಣು ಹಾಗೂ 53 ಗಂಡು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಮೊದಲಿಗೆ ಸಾಮಾನ್ಯ ಶಾಲೆಯಂತೆಯೇ ಗುರುತಿಸಿಕೊಂಡಿದ್ದ ಉಮ್ಮಡಹಳ್ಳಿ ಹೈಸ್ಕೂಲ್ ವರ್ಷ ಕಳೆದಂತೆ ಹೊಸತನದತ್ತ ಹೆಜ್ಜೆ ಹಾಕಲಾರಂಭಿಸಿತು. ಅದರಲ್ಲಿಯೂ ಬಿಆರ್‌ಸಿಯಾಗಿದ್ದ ನಾಗರಾಜು ಶಾಲೆಗೆ ಮುಖ್ಯಶಿಕ್ಷಕರಾದ ಬಳಿಕ ಹಲವು ಮಹತ್ತರ ಬದಲಾವಣೆ ಕಂಡಿತು. ದಾಖಲಾತಿ ಹೆಚ್ಚಳದಿಂದ ಹಿಡಿದು ಮಕ್ಕಳಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಹಶಿಕ್ಷಕರೊಂದಿಗೆ ಸೇರಿ ಶ್ರಮ ವಹಿಸಿರುವುದು ಶಾಲೆಗೆ ಭೇಟಿ ಕೊಟ್ಟರೆ ಕಾಣಿಸುತ್ತದೆ.
ದಾಖಲಾತಿ ವಿಚಾರಕ್ಕೆ ಬರುವುದಾದರೆ ಉಮ್ಮಡಹಳ್ಳಿ ಶಾಲೆಗೆ ಅಕ್ಕಪಕ್ಕದ ಗ್ರಾಮದಿಂದ ಮಕ್ಕಳನ್ನು ಕರೆದುಕೊಂಡು ಬರುವುದು ಸವಾಲಿನ ಕೆಲಸವಾಗಿತ್ತು. ಈ ಹಿನ್ನೆಲೆಯಲ್ಲಿ ಬಸ್ ಸೌಲಭ್ಯದ ವ್ಯವಸ್ಥೆ ಅನಿವಾರ್ಯವಾಯಿತು. ಇದಕ್ಕೆ ಬೆಂಬಲವಾಗಿ ನಿಂತಿದ್ದು ಮಂಡ್ಯ ತಾಲೂಕು ಪಂಚಾಯಿತಿ ಇಒ ವೀಣಾ, ಶಿಕ್ಷಕಿ ವಸುಧಾಮಣಿ, ದಾನಿ ಕೆ.ರವಿ. ಇವರು ನೀಡಿದ ಆರ್ಥಿಕ ಸಹಾಯದಿಂದ ಮಿನಿ ಬಸ್ ಖರೀದಿಸಿ ಅಕ್ಕಪಕ್ಕದ ಗ್ರಾಮದಿಂದ ಸುಮಾರು 30ಕ್ಕೂ ಹೆಚ್ಚು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರಲಾಗುತ್ತಿದೆ. ಅದರಲ್ಲಿಯೂ ತಾಪಂ ಇಇ ವೀಣಾ ಅವರು ತಮ್ಮ ಮೊದಲ ವೇತನ 50 ಸಾವಿರ ರೂಗಳನ್ನು ಶಾಲೆಗೆ ದೇಣಿಗೆ ನೀಡಿದ್ದಾರೆ. ವಸುಧಾಮಣಿ 28 ಹಾಗೂ ಕೆ.ರವಿ 25 ಸಾವಿರ ರೂ ನೆರವು ಕೊಟ್ಟಿದ್ದಾರೆ. ಇದಲ್ಲದೆ ಸಾಕಷ್ಟು ಜನರು ತಮ್ಮಿಂದಾಗುವ ಆರ್ಥಿಕ ಸಹಾಯವನ್ನು ನೀಡಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಲಾಗಿದೆ.
ಇಲ್ಲಿ ಮಕ್ಕಳ ಕಲಿಕೆ ಸ್ಮಾರ್ಟ್
ಶಾಲೆಯಲ್ಲಿ ಮಕ್ಕಳಿಗೆ ಮಾಮೂಲಿ ಕರಿಹಲಗೆಯ ಪಾಠದ ಜತೆಗೆ ಸ್ಮಾರ್ಟ್ ಕ್ಲಾಸ್ ಕೂಡ ಇದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಅನುದಾನವನ್ನು ಬಳಸಿಕೊಂಡು ಲಕ್ಷಾಂತರ ರೂ ಮೌಲ್ಯದ ಸ್ಮಾರ್ಟ್ ಕ್ಲಾಸ್ ಕೊಠಡಿ ನಿರ್ಮಿಸಲಾಗಿದೆ. ಸುಸಜ್ಜಿತವಾದ ಕೊಠಡಿ, ಗುಣಮಟ್ಟದ ಬೆಂಚ್, ಯುಪಿಎಸ್ ಸೇರಿದಂತೆ ಅಗತ್ಯ ಸೌಲಭ್ಯವಿದೆ. ಪ್ರತಿದಿನ ಮೂರು ತರಗತಿಗೂ ಪಾಠ ಮಾಡಲಾಗುತ್ತದೆ. ಇದರ ವಿಶೇಷವೆಂದರೆ ಎಲ್ಲ ವಿಷಯದ ಪೂರ್ಣ ಪಾಠವೂ ಇಲ್ಲಿ ಲಭ್ಯವಿದ್ದು, ಮಕ್ಕಳು ಬೇಕೆಂದಾಗ ನೋಡಿಕೊಳ್ಳಬಹುದು.
ಇದಲ್ಲದೆ ಅಂತರ್ಜಾಲದ ಸೌಲಭ್ಯವಿರುವುದರಿಂದ ದೇಶ ಅಥವಾ ರಾಜ್ಯದ ಹಲವು ಮಹತ್ತರ ಘಟನೆ ಅಂದರೆ ವಿಧಾನಸಭೆ ಕಲಾಪ, ಶಿಕ್ಷಣಕ್ಕೆ ಬೇಕಾದ ವಿಡಿಯೋಗಳನ್ನು ತೋರಿಸಲಾಗುತ್ತದೆ. ಇನ್ನು ವಿಜ್ಞಾನದ ಪ್ರಯೋಗಾಲಯ, ಗ್ರಂಥಾಲಯ, ಅಡುಗೆ ಮನೆ, ಊಟದ ಮನೆ, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಗೃಹದ ವ್ಯವಸ್ಥೆ ಇದೆ. ಅಂತೆಯೇ ಶಿಕ್ಷಕ, ಶಿಕ್ಷಕಿಯರಿಗೂ ಪ್ರತ್ಯೇಕ ಕೊಠಡಿ, ಕ್ರೀಡಾ ಕೊಠಡಿಗಳು ಇವೆ. ಇವುಗಳಿಗೆ ಸರ್ಕಾರಿ ಕಚೇರಿ ಮಾದರಿಯಲ್ಲಿ ನಾಮಫಲಕ ಹಾಕಿರುವುದು ಗಮನಸೆಳೆಯುತ್ತದೆ.