ಹರಿಹರ: ಮನೆಯೆ ಮೊದಲ ಪಾಠ ಶಾಲೆ, ಜನನಿ ತಾನೇ ಮೊದಲ ಗುರು ಎನ್ನುವಂತೆ ಶಿಕ್ಷಕರು ಜ್ಞಾನದ ಜನನಿ ಇದ್ದ ಹಾಗೆ. ಶಿಕ್ಷಕರನ್ನು ಗೌರವಿಸಬೇಕು ಎಂದು ಡಾ.ಪ್ರಭಾ ಮಲ್ಲಿಕಾರ್ಜುನ್ ವಿದ್ಯಾರ್ಥಿಗಳಿಗೆ ತಿಳಿಸಿದರು.
ನಗರದ ಶ್ರೀಗುರು ಬ್ರಹ್ಮಾನಂದಸ್ವಾಮಿ ಮಠದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬ್ರಹ್ಮಾನಂದ ಶ್ರೀಯವರ 53 ನೇ, ಮಾತೋಶ್ರೀ ದೊಡ್ಡಮ್ಮನವರ 25 ನೇ ಹಾಗೂ ಕೃಪಾನಂದ ಭಾರತಿ ಶ್ರೀಯವರ 22 ನೇ ಸ್ಮರಣೋತ್ಸವ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಅಧ್ಯಾತ್ಮ ಚಿಂತನಾಗೋಷ್ಠಿಯಲ್ಲಿ ಮಾತನಾಡಿದರು.
ಮಕ್ಕಳು ನಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ತಿಳಿದುಕೊಳ್ಳಬೇಕು. ಪ್ರತಿದಿನ ಪತ್ರಿಕೆ ಓದಬೇಕು, ಓದಿನ ಜತೆಗೆ ಪಠ್ಯೇತರ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು, ಆಗ ಉತ್ತಮ ಆರೋಗ್ಯ ಸಿಗುತ್ತದೆ ಎಂದರು.
ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪುವವರ ಸಂಖ್ಯೆ ಜಾಸ್ತಿ ಆಗುತ್ತಿದೆ. ಕಾರಣ ಸೂಕ್ತ ಆಹಾರ ಕ್ರಮ, ವ್ಯಾಯಾಮ ಇಲ್ಲದಿರುವುದು. ಒತ್ತಡದ ಜೀವನಶೈಲಿಯಿಂದ ಹೆಚ್ಚು ಸಾವು ಸಂಭವಿಸುತ್ತಿವೆ. ಹೀಗಾಗಿ, ಉತ್ತಮ ಆಹಾರ, ತರಕಾರಿ, ಹಣ್ಣು, ಹಂಪಲು ಸೇವಿಸಿ ಜೀವನದಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳಬೇಕೆಂದರು.
ತುಮ್ಮಿನಕಟ್ಟೆ ಮಾರ್ಕಂಡೇಶ್ವರ ಗುರುಪೀಠದ ಪ್ರಭುಲಿಂಗ ಶ್ರೀಗಳು ಹಾಗೂ ಹದಡಿ ಚಂದ್ರಗಿರಿ ಮಠದ ಪ್ರಿಯಾನಂದ ಶ್ರೀ ಸಾನ್ನಿಧ್ಯ ವಹಿಸಿದ್ದರು.
ಮಲ್ಲಿಕಾರ್ಜುನ ಸ್ವಾಮಿ, ಕುಂಬಳೂರು ವಿರೂಪಾಕ್ಷಪ್ಪ, ಬಿಇಒ ಹನುಮಂತಪ್ಪ, ಬೆಸ್ಕಾಂ ಎಇಇ ಲಕ್ಷ್ಮಣ, ಬಿ. ವಿವೇಕಾನಂದ ಸ್ವಾಮಿ, ಗೀತಾ ವಿವೇಕಾನಂದ ಸ್ವಾಮಿ, ಸುಭಾಷ್ ಬೊಂಗಾಳೆ, ಕಾಳಪ್ಪ ಬೊಂಗಾಳೆ, ಸಿ.ಎನ್. ಮಂಜಣ್ಣ, ಪರಸಪ್ಪ, ಚಂದ್ರಶೇಖರ ಸ್ವಾಮಿ, ರಘುಪತಿ ಇದ್ದರು.