ಮಂಡ್ಯ: ಬ್ರಾಹ್ಮಣ ಸಮುದಾಯವರನ್ನು ಉದ್ದೇಶಪೂರ್ವಕವಾಗಿ ತುಳಿಯುವ ಕೆಲಸ ನಡೆಯುತ್ತಿದೆ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಸುಬ್ರಾಯ ಎಂ. ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಬಂದೀಗೌಡ ಬಡಾವಣೆಯ ಗಾಯತ್ರಿ ಸಮುದಾಯ ಭವನದಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಆಯೋಜಿಸಿದ್ದ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ಹಾಗೂ ವಿಪ್ರ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬ್ರಾಹ್ಮಣರನ್ನು ತುಳಿದರೆ ಹಿಂದುತ್ವವನ್ನು ತುಳಿಯಬಹುದು ಎನ್ನುವ ಉದ್ದೇಶ. ಸಮುದಾಯ ಹಿಂದುತ್ವದ ಆತ್ಮವಾಗಿದ್ದು, ಸಮುದಾಯ ಇಲ್ಲದಿದ್ದರೆ ಹಿಂದುತ್ವ ಉಳಿಯಲು ಸಾಧ್ಯವಿಲ್ಲ. ಹೀಗಾಗಿ ಹಿಂದುತ್ವವನ್ನು ಹತ್ತಿಕ್ಕಬಹುದು ಎಂದುಕೊಂಡಿದ್ದಾರೆ. ಹೀಗಾಗಲೇ ನಮ್ಮನ್ನು ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹತ್ತಿಕ್ಕಿದ್ದಾರೆ. ನಮ್ಮ ಬಳಿ ಈಗ ಉಳಿದುಕೊಂಡಿರುವುದು ಬುದ್ಧಿವಂತಿಕೆ ಮಾತ್ರ. ಇದೀಗ ಬುದ್ಧಿವಂತಿಕೆ ಹತ್ತಿಕ್ಕಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ಬ್ರಾಹ್ಮಣರನ್ನು ಇಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಅದೇ ಕಾರಣಕ್ಕೆ ಒಬ್ಬ ರಾಜಕೀಯ ಮಹಾನ್ ನಾಯಕ ಗಾಂಧೀಜಿಯನ್ನು ಕೊಂದ ವಂಶಸ್ಥರೆಂದಿದ್ದಾರೆಂದು ಮಾಜಿ ಸಿಎಂ ಎಚ್‌ಡಿಕೆ ವಿರುದ್ಧ ಪರೋಕ್ಷ ಕಿಡಿಕಾರಿದರು.
ಆರ್‌ಎಸ್‌ಎಸ್‌ನವರು ಪ್ರಲ್ಹಾದ ಜೋಶಿ ಅವರನ್ನು ಸಿಎಂ ಮಾಡುತ್ತಾರೆಂದು ಅವರು ಹೇಳಿದ್ದಾರೆ. ಹೀಗೆ ಹೇಳಿದರೆ ಒಕ್ಕಲಿಗರು, ಲಿಂಗಾಯತರು ಬಿಜೆಪಿಗೆ ಮತ ನೀಡಲ್ಲ ಎಂದು ಹೇಳಿದ್ದಾರೆ. ಇದರ ಹಿಂದೆ ಹುನ್ನಾರವಿದೆ. ನಮ್ಮನ್ನು ತುಳಿಯುವುದು ಒಂದು ಅಜೆಂಡಾ ಎಂದು ದೂರಿದರು.
ಪತ್ರಕರ್ತೆ ಲೀಲಾವತಿ ಮಾತನಾಡಿ, ಪುರಾತನ ಕಾಲದಿಂದಲೂ ಬ್ರಾಹ್ಮಣರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದು, ಆರೋಗ್ಯವಂತ ಸಮಾಜದ ಶಸ್ತ್ರಚಿಕಿತ್ಸಕರಾಗಿ ಕೆಲಸ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲೂ ಮುಂಚೂಣಿ ನಾಯಕತ್ವ ವಹಿಸಿದ್ದಾರೆ. ಸಾಧನೆ ಮಾಡಿರುವ ಬ್ರಾಹ್ಮಣರು ತಮ್ಮನ್ನು ಸಮಾಜದ ಜತೆ ಗುರುತಿಸಿಕೊಂಡು ಎಲ್ಲರ ಅಭಿವೃದ್ಧಿಗಾಗಿ ಹೆಜ್ಜೆ ಹಾಕಿದ್ದಾರೆ. ಆದರೆ ಇಂದಿನ ಸಮಾಜ ವಿವೇಕ, ವಿವೇಚನೆ ಇಲ್ಲದೇ ಮುನ್ನಡೆಯುತ್ತಿದೆ. ಮೀಸಲಾತಿ, ಜಾತಿ ಜಾತಿಗಳನ್ನು ಎತ್ತಿ ಕಟ್ಟುವ ವ್ಯವಸ್ಥೆಯ ನಡುವೆ ಬ್ರಾಹ್ಮಣ ಸಮಾಜ ಆತ್ಮವಿಮರ್ಶೆ ಮಾಡಿಕೊಂಡು ಮುನ್ನಡೆಯಬೇಕು. ಸಮಾಜದಲ್ಲಿ ಎಲ್ಲರೂ ಸೌಲಭ್ಯಗಳನ್ನು ಪಡೆದ ನಂತರ ನಮಗೆ ಮಂಡಳಿಯ ಮೂಲಕ ಸೌಲಭ್ಯ ಸಿಗುತ್ತಿದೆ. ಇದನ್ನು ಅರಿಯದೆ ಕೆಲವರು ಮಾತನಾಡುತ್ತಿದ್ದಾರೆ. ಜಾತಿ ವ್ಯವಸ್ಥೆ, ರಾಜಕಾರಣ ಮತ್ತು ಅಧಿಕಾರಶಾಹಿ ವ್ಯವಸ್ಥೆಗೆ ಕಡಿವಾಣ ಹಾಕುವ ದಿಕ್ಕಿನಲ್ಲಿ ಜನಾಂಗ ಕಾರ್ಯೋನ್ಮುಖವಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷ ಎಸ್.ಶಂಕರನಾರಾಯಣ ಶಾಸ್ತ್ರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಬ್ರಹ್ಮ ವಿ.ಭಾನುಪ್ರಕಾಶ್ ಶರ್ಮ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಂಜುನಾಥ್, ಪತ್ರಕರ್ತ ಬಸವೇಗೌಡ, ಮುಖಂಡರಾದ ಕೆ.ಎನ್.ಛಾಯಾಪತಿ, ವತ್ಸಲಾ ನಾಗೇಶ್, ಎಂ.ಆರ್.ಬಾಲಕೃಷ್ಣ, ಬಿ.ಜಿ.ಉಮಾ ದೊರೆಸ್ವಾಮಿ ಇತರರಿದ್ದರು.
ಇದೇ ವೇಳೆ ಬೆಳ್ಳೂರು ಎಸ್ ಶಿವರಾಂ, ಎಸ್.ಎನ್.ಸತ್ಯಮೂರ್ತಿ, ಶೈಲಜಾ ಚಂದ್ರಶೇಖರ್, ಕಾವೇರಮ್ಮ, ನಾರಾಯಣ ಶಾಸ್ತ್ರಿ, ಲೀಲಾವತಿ, ಬಿ.ಆರ್.ನಾರಾಯಣ್, ಎನ್.ವಿ.ಕೃಷ್ಣಮೂರ್ತಿ, ಸುರೇಶ್.ಎನ್ ಋಗ್ವೇದಿ ಅವರಿಗೆ ವಿಪ್ರಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆಗಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಮೂರು ಸ್ಥಾನ ಪಡೆದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.