ಜಿಲ್ಲೆ

ಕರ್ನಾಟಕ ಜಾನಪದ ಪರಿಷತ್ತಿಗೆ ಪ್ರಶಸ್ತಿ

ವೀರೇಶ ಸೌದ್ರಿ

ಹೊನ್ನಾವರ: ಕೆರೆಮನೆಯ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ ಕೊಡಮಾಡುವ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರು ಕರ್ನಾಟಕ ಜಾನಪದ ಪರಿಷತ್ತು ಸಂಸ್ಥೆಗೆ ನೀಡಲು ನಿರ್ಧರಿಸಲಾಗಿದೆ ಎಂದು ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದ್ದಾರೆ.

ಪ್ರಶಸ್ತಿ 25 ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ ಹಾಗೂ ಇತರ ಗೌರವಗಳನ್ನು ಒಳಗೊಂಡಿದೆ. ಫೆಬ್ರವರಿ 22ರಿಂದ ಮಾರ್ಚ್ 2ರವರೆಗೆ ಗುಣವಂತೆ ಯಕ್ಷಾಂಗಣದಲ್ಲಿ ನಡೆಯಲಿರುವ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಸಂದರ್ಭದಲ್ಲಿ ಫೆ. 22 ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ:

ಕೆರೆಮನೆ ಶಿವರಾಮ ಹೆಗಡೆ ಅವರ ಕಿರಿಯ ಪುತ್ರ ಕೆರೆಮನೆ ಗಜಾನನ ಹೆಗಡೆ ಹೆಸರಿನಲ್ಲಿ ಸ್ಥಾಪಿತವಾದ ಪ್ರಶಸ್ತಿಯನ್ನು ಪ್ರಸಿದ್ಧ ಯಕ್ಷಗಾನದ ಭಾಗವತ ಹಾಗೂ ಗುರು ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ ಅವರಿಗೆ ಘೋಷಣೆ ಮಾಡಲಾಗಿದೆ. ಪ್ರಶಸ್ತಿಯು 15 ಸಾವಿರ ರೂ. ನಗದು, ಪ್ರಶಸ್ತಿ ಪತ್ರ ಹೊಂದಿದೆ. ನಾಟ್ಯೋತ್ಸವದ ಎರಡನೇ ದಿನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.