ಜಿಲ್ಲೆ

ಯುವಪೀಳಿಗೆ ಉತ್ತಮ ಮಾರ್ಗ ಅನುಸರಿಸಿ: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಕಿವಿಮಾತು

reportermys

ಮಂಡ್ಯ: ಇಂದಿನ ಯುವ ಶಕ್ತಿ ಉತ್ತಮ ಮಾರ್ಗದಲ್ಲಿ ಬದ್ಧತೆಯೊಂದಿಗೆ ನಡೆಯಬೇಕಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ತಿಳಿಸಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ಮಂಗಲ ಪರಿಸರ ರೂರಲ್ ಡೆವಲಡ್‌ಮೆಂಟ್ ಸೊಸೈಟಿ ವತಿಯಿಂದ ಏರ್ಪಡಿಸಿದ್ದ ಯುವ ಮುನ್ನಡೆ ಅಂಗವಾಗಿ ಯುವ ವಿವೇಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ದೇಶ ಸಶಕ್ತವಾಗಿ ಮುನ್ನಡೆಯಲು ಯುವಶಕ್ತಿಯ ಪಾತ್ರ ಪ್ರಧಾನವಾಗಿದೆ. ಸೂಕ್ತ ಶಿಕ್ಷಣದ ಮುಖೇನ ವ್ಯಕ್ತಿತ್ವ ರೂಪಿಸಿಕೊಂಡು ಯುವಜನರು ದೇಶದ ಭವಿಷ್ಯವನ್ನು ಬರೆಯಬಲ್ಲರು ಎಂದರು.

ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಡ್ಸ್ ಮತ್ತು ಗೈಡ್ಸ್ ಸೇರಿ ಸೇವೆಯಲ್ಲಿ ನಿರತವಾಗಿರುವ ಯುವ ಶಕ್ತಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಯುವ ವಿವೇಕ ಪುರಸ್ಕಾರ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮನಸ್ಸಿದ್ದರೆ ಮಾರ್ಗ ಎಂಬ ಹೆಗ್ಗಳಿಕೆಯ ಮಾತಿನ ಜತೆಗೆ ದೇಶವನ್ನು ಸುಭದ್ರವಾಗಿ ಕಟ್ಟುವ ಕಟ್ಟಾಳುಗಳು ಯುವಜನರಾಗಿದ್ದಾರೆ. ಸಂಸ್ಕಾರ ಪಡೆಯುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ಆನಂದ್ ಸಿ.ಹೆಗ್ಗಡೆ ಮಾತನಾಡಿ, ಯುವಪೀಳಿಗೆ ಅತಿ ಹೆಚ್ಚು ಉನ್ನತ ಚಿಂತನೆಗಳನ್ನು ಅಳವಡಿಸಿಕೊಂಡು ಗುರಿ ಹೊಂದಬೇಕು. ಸೇವೆ ಹಾಗೂ ಸದ್ಗುಣಗಳ ಅಳವಡಿಕೆಗೆ ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್ ಸಹಕಾರಿಯಾಗಲಿದೆ. ದೇಶವನ್ನು ಕಟ್ಟುವ ಕಟ್ಟಾಳು ಯುವ ಜನರು ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳುವುದು ತುಂಬ ಮುಖ್ಯವಾದದ್ದು ಎಂದರು.

ಸೊಸೈಟಿಯ ಅಧ್ಯಕ್ಷ ಮಂಗಲ ಎಂ.ಯೋಗೇಶ್, ಸಂಸ್ಕೃತಿ ಚಿಂತಕ ಎಂ.ಜಿ.ಎನ್.ಪ್ರಸಾದ್, ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಪ್ರೊ.ವೈ.ಕೆ.ಭಾಗ್ಯ, ಎನ್‌ಸಿಸಿ ಅಧಿಕಾರಿ ಪ್ರೊ.ಸುರೇಶ್, ಸ್ಕೌಟ್ಸ್ ಮತ್ತು ಗೈಡ್ಸ್‌ನ ವರದರಾಜು, ಕೆ.ಪಿ.ಅರುಣಕುಮಾರಿ ಇತರರಿದ್ದರು.

ಇದೇ ಸಂದರ್ಭದಲ್ಲಿ ಕೆ.ಎಸ್.ಶ್ರೀಕಾಂತ್‌ಗೌಡ, ಕೆ.ಎಸ್.ರಕ್ಷಿತ್, ಕೆ.ಬಿ.ಸಂಜಯ್, ಎಚ್.ಕೆ.ಕಿರಣ್ ಮತ್ತು ಮಾನಸಾ ಅವರಿಗೆ ಯುವ ವಿವೇಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.