ಜಿಲ್ಲೆ

ರಾಜ್ಯಮಟ್ಟದ ಪ್ರಶಸ್ತಿಗೆ ಮೂವರು ಆಯ್ಕೆ: ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಮತ್ತು ಡಾ.ವಿ.ಟಿ.ಸುಶೀಲಾ ಜಯರಾಂ ಟ್ರಸ್ಟ್ ಕಾರ್ಯದರ್ಶಿ ಡಾ.ಕೆ.ಎಸ್.ಜಯರಾಂ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಪ್ರತಿಷ್ಠಿತ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಮತ್ತು ಡಾ.ವಿ.ಟಿ.ಸುಶೀಲಾ ಜಯರಾಂ ಟ್ರಸ್ಟ್‌ನಿಂದ ಕೊಡಮಾಡುವ ರಾಜ್ಯಮಟ್ಟದ ಮರಣೋತ್ತರ ದೇಶ ಸೇವಾ ಪ್ರಶಸ್ತಿಗೆ ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿ ಗ್ರಾಮದ ವೀರಸೈನಿಕ ಕೆ.ಪಿ.ಜನಾರ್ಧನಗೌಡ, ದಿವಂಗತ ಡಾ.ವಿ.ಟಿ.ಸುಶೀಲಾ ಜಯರಾಂ ವೈದ್ಯಕೀಯ ಸೇವಾ ಪ್ರಶಸ್ತಿಗೆ ಹಾಸನ ಜಿಲ್ಲೆ ದುದ್ದ ಹೋಬಳಿ ವಳಗೆರೆಯಲ್ಲಿ ಗ್ರಾಮದವರೂ ಆದ ನೆಲಮಂಗಲ ಬಿ.ಜಿ.ಎಸ್ ಮೆಡಿಕಲ್ ಹಾಸ್ಪಿಟಲ್‌ನ ಮುಖ್ಯ ಆಡಳಿತಾಧಿಕಾರಿ ಡಾ.ವಿ.ಆರ್.ಕೃಷ್ಣಮೂರ್ತಿ ಆಯ್ಕೆಯಾಗಿದ್ದಾರೆ.
ಅಂತೆಯೇ ದಿವಂಗತ ಪುಟ್ಟಚ್ಚಿ ಸಿದ್ದೇಗೌಡ(ಸೀತಾಸುತ) ಸ್ಮಾರಕ ‘ಸಾಹಿತ್ಯ ಸೇವಾ ಪ್ರಶಸ್ತಿ’ಗೆ ಮದ್ದೂರು ತಾಲೂಕು ಸಾದೊಳಲು ಗ್ರಾಮದವರೂ ಆದ ಹಾಸನ ಹೇಮಗಂಗೋತ್ರಿ ವಿಶ್ವವಿದ್ಯಾನಿಲಯ ರಿಜಿಸ್ಟ್ರರ್ ಡಾ.ಪುಟ್ಟಸ್ವಾಮಿ ಆಯ್ಕೆಯಾಗಿದ್ದಾರೆ. ಈ ಮೂವರಿಗೆ ಜು.7ರಂದು ನಗರದ ಕಾರಸವಾಡಿ ರಸ್ತೆಯ ಚಂದ್ರದರ್ಶನ ಕಲ್ಯಾಣಮಂಟಪದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ತಲಾ 20 ಸಾವಿರ ರೂ ನಗದಿನ ಜತೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‌ನ ಕಾರ್ಯದರ್ಶಿ ಡಾ.ಕೆ.ಎಸ್.ಜಯರಾಂ, ಅಂದು ಬೆಳಗ್ಗೆ 10.30ಕ್ಕೆ ಆಯೋಜಿಸಿರುವ ಸಾಹಿತಿ ಸೀತಾಸುತ(ಕಚ್ಚಿಗೆರೆ ಸಿದ್ದೇಗೌಡ) 126ನೇ ವರ್ಷದ ಸಂಸ್ಮರಣೆ ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಎನ್.ಕೆ.ಲೋಕನಾಥ್ ವಹಿಸಲಿದ್ದಾರೆ. ಸೀತಾಸುತರನ್ನು ಕುರಿತು ಟ್ರಸ್ಟ್ ಅಧ್ಯಕ್ಷ ಕೆ.ಎಸ್.ದೊರೆಸ್ವಾಮಿ ಮಾತನಾಡಲಿದ್ದಾರೆ. ಇಬ್ಬರು ಸೈನಿಕರಿಗೆ ವಿಶೇಷ ಗೌರವ ಸಮರ್ಪಣೆ ಆಯೋಜಿಸಲಾಗಿದೆ. ಅಂತೆಯೇ ಮಂಡ್ಯದ ನೃತ್ಯಚೇತನ ಕಲಾಶಾಲೆಯ ನಿರ್ದೇಶಕಿ ವಿದುಷಿ ಎಂ.ಎಸ್.ಬಿಂದುರಾವ್ ನೇತೃತ್ವದಲ್ಲಿ ಭರತನಾಟ್ಯ ನೃತ್ಯ ವೈಭವ ಇರಲಿದೆ ಎಂದು ವಿವರಿಸಿದರು.
ಟ್ರಸ್ಟ್ ಅಧ್ಯಕ್ಷ ಕೆ.ಎಸ್.ದೊರೆಸ್ವಾಮಿ, ಖಜಾಂಚಿ ಕೆ.ಎಸ್.ಶ್ರೀಕಂಠಸ್ವಾಮಿ ಇದ್ದರು.

ಪ್ರಶಸ್ತಿ ಪುರಸ್ಕೃತರ ಬಗ್ಗೆ ಒಂದಿಷ್ಟು
1993 ಏ.14ರಂದು ಪ್ರಕಾಶ್ ಮತ್ತು ಭಾರತಿ ದಂಪತಿ ಮಗನಾಗಿ ಜನಿಸಿದ ಜನಾರ್ಧನಗೌಡ ಅವರು 2013ರಲ್ಲಿ ಭಾರತೀಯ ಸೇನೆಗೆ ನೇಮಕಗೊಂಡರು. 2024 ಜೂ.23ರವರೆಗೆ ರೂರ್ಕಿ, ಸೂರತಗಡ, ಜೋಧಪುರ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಸೇವೆ ಸಲ್ಲಿಸಿದ್ದಾರೆ. ಕರ್ತವ್ಯ ನಿರತರಾಗಿದ್ದಾಗ ಮಾತೃಭೂಮಿಗಾಗಿ ಹೋರಾಡಿ ಹುತಾತ್ಮರಾದರು.
1964 ಸೆ.15ರಂದು ರಂಗೇಗೌಡ ಮತ್ತು ಗೌರಮ್ಮ ದಂಪತಿ ಮಗನಾಗಿ ಜನಿಸಿದ ಡಾ.ವಿ.ಆರ್.ಕೃಷ್ಣಮೂರ್ತಿ ಬೆಳಗಾವಿಯಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದರು. ಅವರು ವಿವಿಧೆಡೆ ವೈದ್ಯಾಧಿಕಾರಿಯಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರು. ಇವರ ಸೇವೆಗೆ ಹಲವು ಪ್ರಶಸ್ತಿ ಒಲಿದುಬಂದಿವೆ.
ಮರೀಗೌಡ ಮತ್ತು ನಿಂಗಮ್ಮ ದಂಪತಿಯ ಮಗ ಡಾ.ಪುಟ್ಟಸ್ವಾಮಿ ಅವರು 29 ವರ್ಷದ ಸುದೀರ್ಘ ಬೋಧನಾ ಮತ್ತು 27 ವರ್ಷದ ಸಂಶೋಧನಾ ಅನುಭವ ಹೊಂದಿದ್ದಾರೆ. ಹಾಸನ ವಿವಿಯ ಹೇಮ ಗಂಗೋತ್ರಿಯ ಮೊದಲ ಕುಲಸಚಿವರಾಗಿ ಸೇವೆ ಸಲ್ಲಿಸಿರುವುದು ಹೆಮ್ಮೆಯ ವಿಷಯ. ಕನ್ನಡ ಸಾಹಿತ್ಯದ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.