ಜಿಲ್ಲೆ

ಚಿಕ್ಕರಂಗಮ್ಮ, ಸೇವಾಕಿರಣ ಟ್ರಸ್ಟ್‌ಗೆ ಆ.31ರಂದು ಪ್ರಶಸ್ತಿ ಪ್ರದಾನ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಜನದನಿ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕರ್ನಾಟಕ ಸಂಘದಿಂದ ಕೊಡಮಾಡುವ 26ನೇ ವರ್ಷದ ಇಂಡುವಾಳು ಎಚ್.ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿಗೆ ಮಂಡ್ಯದ ಸೇವಾಕಿರಣ ಪಬ್ಲಿಕ್ ವೆಲ್‌ಫೇರ್ ಚಾರಿಟಬಲ್ ಟ್ರಸ್ಟ್ ಹಾಗೂ ದೇವಮ್ಮ ಇಂಡುವಾಳು ಎಚ್.ಹೊನಯ್ಯ ಸಮಾಜ ಸೇವಾ ಪ್ರಶಸ್ತಿಗೆ ನಂಜನಗೂಡು ತಾಲೂಕು ಆಲಂಬೂರು ಗ್ರಾಮದ ಚಿಕ್ಕರಂಗಮ್ಮ ಆಯ್ಕೆಯಾಗಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಆ.31ರಂದು ನಗರದ ಕರ್ನಾಟಕ ಸಂಘದ ಆವರಣದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ತಲಾ 25 ಸಾವಿರ ರೂ ನಗದಿನ ಜತೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದರೊಟ್ಟಿಗೆ 2022-23ನೇ ಸಾಲಿನ ಎಚ್.ಶಾರದಮ್ಮ ಮತ್ತು ಕೆಂಪಯ್ಯ ವಿದ್ಯಾರ್ಥಿ ಪುರಸ್ಕಾರವನ್ನು ಇಂಡುವಾಳು ಪ್ರೌಢಶಾಲೆಯ ಇಬ್ಬರು ಹಾಗೂ ಕೊತ್ತತ್ತಿ ವಿದ್ಯಾಗಣಪತಿ ಪ್ರೌಢಶಾಲೆಯ ಇಬ್ಬರಿಗೆ ನೀಡಲಾಗುವುದು ಎಂದರು.

ಅಂದು ಸಂಜೆ 4ಗಂಟೆಗೆ ಆಯೋಜಿಸಿರುವ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಡಾ.ಕುಮಾರ ವಹಿಸಲಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಬಿ.ಶ್ರೀನಿವಾಸಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದು, ಲಯನ್ಸ್‌ನ ಜಿಲ್ಲಾ ಸಲಹೆಗಾರ ಕೆ.ದೇವೇಗೌಡ ಹಾಗೂ ಇಂಡುವಾಳು ಎಚ್.ಹೊನ್ನಯ ಅವರ ಮಗ ಡಾ.ಎಚ್.ಸಿದ್ದಪ್ಪ ಭಾಗವಹಿಸಲಿದ್ದಾರೆಂದು ವಿವರಿಸಿದರು.

ಜನದನಿ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಜಯರಾಂ ಇದ್ದರು.