ಮಂಡ್ಯ: ವಿದೇಶಕ್ಕೆ ಹೋಗಿ ಬರುವ ಕೆಲವರು ಕನ್ನಡ ಮರೆಯುವ ಕಾಲಘಟ್ಟದಲ್ಲಿ ನಾವಿರುವುದು ಬೇಸರದ ಸಂಗತಿ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಎನ್.ಕೆ.ಲೋಕನಾಥ್ ಹೇಳಿದರು.
ನಗರದ ಚಂದ್ರದರ್ಶನ ಕಲ್ಯಾಣ ಮಂಟಪದಲ್ಲಿ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಮತ್ತು ಡಾ.ವಿ.ಟಿ.ಸುಶೀಲಾ ಜಯರಾಂ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಶತಾಯುಷಿ ಸಾಹಿತಿ ದಿ. ಸೀತಾಸುತ ಅವರ 126ನೇ ವರ್ಷದ ಸಂಸ್ಮರಣೆ ಮತ್ತು ಡಾ.ವಿ.ಟಿ.ಸುಶೀಲಾ ಜಯರಾಂ ಹೆಸರಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಂಡ್ಯ ಜನರು ಹೃದಯವಂತರು ಎಂಬುದಕ್ಕೆ ಎಲ್ಲೋ ಇರುವ ನನಗೆ ಗೌರವ ತಂದುಕೊಡಲು ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿರುವುದು ಎಂದರು.
ಸೀತಾಸುತ ಅವರ ಸಾಹಿತ್ಯವನ್ನು ನಾನು ಓದಿದ್ದೇನೆ, ಹತ್ತಿರದಿಂದ ಕಂಡಿದ್ದೇನೆ. ಅವರ ಬರಹಗಳು ಸಮಾಜದಲ್ಲಿ ಚರ್ಚೆ ಆಗಬೇಕು. ಇಲ್ಲದಿದ್ದರೆ ಅವುಗಳು ಗ್ರಂಥದಲ್ಲಿಯೇ ಉಳಿದು ಬಿಡುತ್ತವೆ ಎಂದು ಅಭಿಪ್ರಾಯಪಟ್ಟರು.
ಸೀತಾಸುತ ಅವರು ಸಾಹಿತ್ಯಕ್ಕೆ ಒತ್ತು ಕೊಡುವುದಷ್ಟೇ ಅಲ್ಲ ಶಿಕ್ಷಣಕ್ಕೂ ಒತ್ತು ನೀಡಿದ್ದರು ಎಂಬುದಕ್ಕೆ ಸಾಕ್ಷಿ ಎಂದರೆ ಇವರ ಕುಟುಂಬದಲ್ಲಿ ಬಹುಪಾಲು ವೈದ್ಯರೇ ಹೆಚ್ಚಿದ್ದಾರೆ. ಅದೇ ರೀತಿ ಸಾಹಿತ್ಯದ ಜತೆಗೆ ಶಿಕ್ಷಣದ ನಂಟಿಗೂ ಒಗ್ಗಿಕೊಂಡಿದ್ದರು. ಇಂತಹ ಸೀತಾಸುರ ಜೀವನ ಮತ್ತು ಅವರು ನಡೆದು ಬಂದ ದಾರಿ ಎಲ್ಲರಿಗೂ ತಿಳಿಯಬೇಕು. ಹಾಗಾಗಿ ಅವರ ಸಾಹಿತ್ಯಗಳು ಚರ್ಚೆಗೆ ಬರಬೇಕು. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಸೀತಾಸುತ ಅವರು ಸರಳ ಜೀವನ ನಡೆಸುತ್ತಿದ್ದರು ಎಂಬುದನ್ನು ಕೇಳಿದ್ದೇನೆ. ಇಂತಹ ಮಹನೀಯರ ಕೆಲಸವನ್ನು ನೆನೆಯಲು ವೈದ್ಯ, ಸಾಹಿತ್ಯ ಹಾಗೂ ಯೋಧರಿಗೆ ಸನ್ಮಾನ ಮಾಡಿ ಗೌರವಿಸುತ್ತಿರುವುದು ಉತ್ತಮ ಕೆಲಸವಾಗಿದೆ. ನಾನು ಕೂಡ ಇಂತಹ ಕಾರ್ಯಕ್ರಮಗಳು ನಡೆಯಲು ಸಹಕರಿಸುವೆ ಎಂದು ತಿಳಿಸಿದರು.
ವೈದ್ಯಕೀಯ ಸೇವಾ ಪ್ರಶಸ್ತಿ ಸ್ವೀಕರಿಸಿದ ಬಿಜಿಎಸ್ ಮೆಡಿಕಲ್ ಹಾಸ್ಪಿಟಲ್‌ನ ಮುಖ್ಯ ಆಡಳಿತಾಧಿಕಾರಿ ಡಾ.ಕೃಷ್ಣಮೂರ್ತಿ ಮಾತನಾಡಿ, ಪ್ರಶಸ್ತಿಯನ್ನು ಸ್ವೀಕರಿಸಿದ್ದಕ್ಕೆ ಸಂತೋಷವಾಗಿದೆ. ನನಗಿಂತಲೂ ಹಿಂದೆ ಈ ಪ್ರಶಸ್ತಿಯನ್ನು ದಿಗ್ಗಜರಿಗೆ ನೀಡಿದ್ದಾರೆ. ಅವರ ಸಾಲಿನಲ್ಲಿ ನನ್ನನ್ನೂ ಗೌರವಿಸಿ ಪ್ರಶಸ್ತಿ ನೀಡಿರುವ ಸೀತಾಸುತರ ಕುಟುಂಬಕ್ಕೆ ಅನಂತ ಧನ್ಯವಾದಗಳು ಎಂದರು.
ಡಾ.ವಿ.ಟಿ.ಸುಶೀಲಾ ಜಯರಾಂ ಟ್ರಸ್ಟ್‌ನವರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಮಿಮ್ಸ್‌ಗೆ 60 ಹಾಸಿಗೆಯ ಹೆರಿಗೆ ಕೊಠಡಿ ನಿರ್ಮಾಣ, ಡಯಾಲಿಸಿಸ್ ಕೇಂದ್ರಕ್ಕೆ ಉಪಕರಣಗಳನ್ನು ನೀಡಿ ಬಡಜನರ ಆರೋಗ್ಯಕ್ಕೆ ನೆರವಾಗಿದ್ದಾರೆ. ಉಳ್ಳವರು ಸಮಾಜದಲ್ಲಿ ಸೇವೆ ಮಾಡುವುದು ಕಡಿಮೆ. ಬೇರೆಯವರ ಜೀವನಕ್ಕೆ ನೆರವಾಗಲು ನಿಂತಿರುವ ಈ ಕುಟುಂಬಕ್ಕೆ ದೇವರು ಮತ್ತಷ್ಟು ಶಕ್ತಿಯನ್ನು ನೀಡಲೆಂದು ದೇವರಲ್ಲಿ ಪ್ರಾರ್ಥಿಸುವೆ ಎಂದರು.
ಟ್ರಸ್ಟ್‌ನ ಅಧ್ಯಕ್ಷ ಕೆ.ಎಸ್.ದೊರೆಸ್ವಾಮಿ, ಡಾ.ಕೆ.ಎಸ್.ಜಯರಾಂ, ಡಾ.ಕೆ.ಎಸ್.ಕೃಷ್ಣ, ಕೆ.ಎಸ್.ಶ್ರೀಕಂಠಸ್ವಾಮಿ ಭಾಗವಹಿಸಿದ್ದರು. ಇದೇ ವೇಳೆ ದೇಶ ಸೇವಾ ಪ್ರಶಸ್ತಿಯನ್ನು ವೀರಯೋಧ ಕೆ.ಪಿ.ಜನಾರ್ಧನಗೌಡ(ಮರಣೋತ್ತರ) ಅವರ ಪತ್ನಿ ರಂಜಿತಾ, ಸಾಹಿತ್ಯ ಸೇವಾ ಪ್ರಶಸ್ತಿಯನ್ನು ಹಾಸನ ಹೇಮಗಂಗೋತ್ರಿ ವಿವಿ ರಿಜಿಸ್ಟ್ರಾರ್ ಪುಟ್ಟಸ್ವಾಮಿ ಹಾಗೂ ದಿ.ಡಾ.ವಿ.ಟಿ.ಸುಶೀಲಾ ಜಯರಾಂ ಹೆಸರಿನ ವೈದ್ಯಕೀಯ ಸೇವಾ ಪ್ರಶಸ್ತಿಯನ್ನು ಬಿಜಿಎಸ್ ಮೆಡಿಕಲ್ ಹಾಸ್ಟೆಟಲ್‌ನ ಮುಖ್ಯ ಆಡಳಿತಾಧಿಕಾರಿ ಡಾ.ಕೃಷ್ಣಮೂರ್ತಿ ಅವರಿಗೆ ನೀಡಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಪ್ರಶಸ್ತಿ ಪುರಸ್ಕೃತರನ್ನು ನಗರದ ಹೊಸಹಳ್ಳಿ ಬಿಸಿಲು ಮಾರಮ್ಮ ದೇವಸ್ಥಾನದ ಆವರಣದಿಂದ ಬೆಳ್ಳಿ ಸಾರೋಟಿನಲ್ಲಿ ಎತ್ತಿನಗಾಡಿ ಜತೆಯಲ್ಲಿ ವೇದಿಕೆ ಬಳಿ ಕರೆತರಲಾಯಿತು. ಭರತನಾಟ್ಯ ನೃತ್ಯ ವೈಭವ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.