ಜಿಲ್ಲೆ

ಸಂಗೀತದ ರೂಪಕವಾಗಿ ಭರತನಾಟ್ಯ ಉದ್ಭವ: ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ನಮ್ಮ ದೇಶದ ಸಂಸ್ಕೃತಿಗಳಲ್ಲಿ ಒಂದಾಗಿರುವ ಭರತನಾಟ್ಯ ಗಂಡು ಕಲೆ. ಇದು ಮಹಾಪುರುಷರಿಂದ ಮತ್ತು ಋಷಿಮುನಿಗಳಿಂದ ಸಂಗೀತದ ರೂಪಕವಾಗಿ ಉದ್ಭವವಾಗಿದೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.

ನಗರದ ಪಿಇಎಸ್ ಕಾಲೇಜಿನ ವಿವೇಕಾನಂದ ರಂಗಮಂದಿರದಲ್ಲಿ ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನ 28ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಗುರುದೇವೋತ್ಸವದಲ್ಲಿ ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಅವರಿಗೆ ‘ಗುರುದೇವ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಭರತಮುನಿಗಳು ತಂದ ನಾಟ್ಯದಲ್ಲಿ ಭಾವ-ರಾಗ-ತಾಳಗಳ ಒಂದು ಪಾಕವಿದೆ. ಅದು ನಮ್ಮ ಮೈ-ಮನಗಳನ್ನು ಹದವಾಗಿಸಿ ನಮ್ಮನ್ನು ಧನ್ಯರನ್ನಾಗಿ ಮಾಡುತ್ತದೆ. ಅಂತರಂಗದ ಆನಂದವನ್ನು ನಾಟ್ಯದ ಮೂಲಕ ಹೊರತಂದು, ಅದನ್ನು ಆಸ್ವಾದಿಸುವವರನ್ನು ಅಂತರಂಗಕ್ಕೆ ಒಯ್ಯುವ ಜಾಣ್ಮೆ ನಮ್ಮ ನಾಟ್ಯಕಲೆಯಲ್ಲಿದೆ ಎಂದರು.

ಭರತನಾಟ್ಯವು ಮನೋರಂಜನೆಗೆ ಮಾತ್ರ ಸೀಮಿತವಾಗದೆ ಆತ್ಮರಂಜನೆಯವರೆಗಿನ ವಿಷಯವನ್ನಿಟ್ಟುಕೊಂಡಿದೆ. ಆದರೆ ಇಂದು ಋಷಿಗಳು ನಾಟ್ಯಕಲೆಗೆ ಹಾಕಿಕೊಟ್ಟ ಹಾದಿಯನ್ನು ಬಿಟ್ಟು ಕಲಾಪ್ರದರ್ಶನಗಳು ಎಷ್ಟೋ ಕಡೆಗಳಲ್ಲಿ ಸ್ವತಂತ್ರವಾಗಿ ಬೆಳೆದುಬಿಟ್ಟಿರುವುದೂ ಉಂಟು. ಅಂತಹ ದೋಷಗಳನ್ನು ಜ್ಞಾನಿಗಳ ದಿಗ್ದರ್ಶನದಂತೆ ಸರಿಪಡಿಸಿಕೊಂಡಲ್ಲಿ ಈ ಕಲೆಯು ನಮ್ಮನ್ನು ಋಷಿಗಳು ಕಂಡುಕೊಅಡ ಜೀವನದ ಮೂಲೋದ್ದೇಶವಾದ ಪರಮಾತ್ಮ ಸಾಕ್ಷಾತ್ಕಾರದವರೆಗೆ ತಲುಪಿಸುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಪ್ರಸ್ತುತ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುವ ಧಾರವಾಹಿಗಳಿಗಿರುವ ಮೋಹ ಹಾಗೂ ಆಸಕ್ತಿ ನೈಜ ಕಲೆಗಳಿಗೆ ತೋರಿಸುತ್ತಿಲ್ಲ. ನೃತ್ಯ ಹಾಗೂ ಸಂಗೀಗ ಮನಸ್ಸಿಗೆ ಮುದ ನೀಡುವ ಕಲೆಗಳು. ಇವುಗಳನ್ನು ಪೋಷಿಸಿ ಮುಂದಿನ ಪೀಳಿಗೆಗೆ ನೀಡಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ. ಇಂದು ನಾವೆಲ್ಲ ಅಂಕಗಳ ಹಿಂದೆ ಬಿದ್ದಿದ್ದೇವೆ. ನಮ್ಮ ಮಕ್ಕಳು ವೈದ್ಯನಾಗಬೇಕು, ಐಎಎಸ್, ಐಪಿಎಸ್, ಇಂಜಿನಿಯರ್ ಆಗಬೇಕೆಂದು ಮಗುವಿಗೆ ಒತ್ತಡ ಹೇರುತ್ತಿದ್ದೇವೆ. ಆದರೆ, ಆ ಮಗುವಿಗೆ ಯಾವುದರಲ್ಲಿ ಆಸಕ್ತಿ ಇದೆ ಎಂದು ಯಾರೂ ಯೋಚಿಸುತ್ತಿಲ್ಲ. ಇನ್ನು 25 ವರ್ಷಗಳು ಕಳೆದರೆ ಎಲ್ಲರೂ ಪದವೀಧರರಾಗುತ್ತಾರೆ. ಎಲ್ಲಿ ಉದ್ಯೋಗ ಸಿಗುತ್ತದೆ. ಆಗ ಪುನಃ ಕಲೆಯತ್ತಲೇ ಎಲ್ಲರೂ ತಿರುಗಿ ನೋಡುವ ಸಂದರ್ಭ ಬರಲಿದೆ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಯುವಜನತೆ ಪಠ್ಯ ಹೊರತುಪಡಿಸಿ ಬೇರಾವುದೇ ಚಟುವಟಿಕೆಗಳಲ್ಲಿ ತೊಡಗದಿರುವುದರಿಂದ ಹೆಚ್ಚು ದುಶ್ಚಟಗಳಿಗೆ ಒಳಗಾಗಿದ್ದಾರೆ. ಆದ್ದರಿಂದ ಪಠ್ಯದ ಜತೆಗೆ ಸಂಗೀತ, ನೃತ್ಯ, ಕ್ರೀಡೆಗಳಲ್ಲಿ ಭಾಗವಹಿಸಿದರೆ ದುಶ್ಚಟಗಳಿಂದ ದೂರವಿದ್ದು, ಓದಿನಲ್ಲೂ ಮುಂದಿರುತ್ತಾರೆ ಎಂದು ತಿಳಿ ಹೇಳಿದರು.

ಕಾವೇರಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಪ್ರದೀಪ್‌ಕುಮಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ, ಅಕಾಡೆಮಿ ನಿರ್ದೇಶಕಿ ಚೇತನಾ ರಾಧಾಕೃಷ್ಣ, ವ್ಯವಸ್ಥಾಪಕ ನಿರ್ದೇಶಕ ಪಿ.ಎಂ.ರಾಧಾಕೃಷ್ಣ ಉಪಸ್ಥಿತರಿದ್ದರು.