ಜಿಲ್ಲೆ

ಉದ್ಯಮಿ ಮಹಾಲಿಂಗೇಗೌಡ ನಡೆ ಮಾದರಿ: ಸ್ಪಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಸ್ವಾಮೀಜಿ ಮೆಚ್ಚುಗೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಉದ್ಯಮಿ ಮುದ್ದನಘಟ್ಟ ಮಹಾಲಿಂಗೇಗೌಡ ತಾವು ದುಡಿದಿದ್ದನ್ನೆಲ್ಲ ಕುಟುಂಬಕ್ಕೆ ಸೀಮಿತವಾಗಿರಿಸದೆ, ಲಾಭಾಂಶದ ಒಂದಷ್ಟು ಭಾಗವನ್ನು ಸಮಾಜಮುಖಿ ಚಟುವಟಿಕೆಗಳಿಗೆ ತೆಗೆದಿರಿಸುವುದು ಮಾದರಿ ಕಾರ್ಯ ಎಂದು ಸ್ಪಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬಸರಾಳು ಗ್ರಾ.ಪಂ ಮಾಜಿ ಅಧ್ಯಕ್ಷ ಮುದ್ದನಘಟ್ಟ ಮಹಾಲಿಂಗೇಗೌಡ ಜನ್ಮದಿನದ ಅಂಗವಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹಳ್ಳಿಯಲ್ಲಿ ಜನಿಸಿದ ಸಾಮಾನ್ಯ ಯುವಕ ಬೆಂಗಳೂರಿನಂತಹ ಮಹಾನಗರದಲ್ಲಿ ಕಂಪನಿ ಕಟ್ಟಿ 13 ಸಾವಿರ ಜನರಿಗೆ ಉದ್ಯೋಗ ನೀಡಿರುವುದು ಪುಣ್ಯದ ಕೆಲಸ. ರಾಘವೇಂದ್ರ ಮತ್ತು ಮಹಾಲಿಂಗೇಗೌಡ ಸಹೋದರರು ಉದ್ಯಮಿಯಾಗಿ ಬೆಳವಣಿಗೆ ಸಾಧಿಸಿರುವುದು ಮಹತ್ವದ ವಿಚಾರ. ಅಲ್ಲದೆ, ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಮೂಲಕ ಅವರಿಗೆ ಜೀವನಾಧಾರ ಕಲ್ಪಿಸಿರುವುದು ಹೆಮ್ಮೆಯ ಸಂಗತಿ. ಪಾಲಕರ ಹೆಸರಿನಲ್ಲಿ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ ತೆಂಗಿನ ಸಸಿ ವಿತರಣೆ, ಆರೋಗ್ಯ ಶಿಬಿರ, ಉದ್ಯೋಗ ಮೇಳ, ಮಹಿಳೆಯರಿಗೆ ಹೊಲಿಗೆ ಯಂತ್ರ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಹಲವರಿಗೆ ನೆರವಾಗಿರುವುದು ಶ್ಲಾಘನೀಯ ಎಂದು ಹೇಳಿದರು.

ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ವಿ.ಗೋಪಾಲಗೌಡ ಮಾತನಾಡಿ, ಹಣ ಸಂಪಾದಿಸುವುದಷ್ಟೇ ಮುಖ್ಯವಲ್ಲ. ಅದನ್ನು ಸಮಾಜ ಸೇವೆಗೆ ಬಳಸುವ ಮೂಲಕ ಅಶಕ್ತರಿಗೆ ನೆರವಾಗಬೇಕು. ಸ್ವಾರ್ಥವನ್ನು ಬಿಟ್ಟು ನಿಸ್ವಾರ್ಥದಿಂದ ಸೇವೆ ಸಲ್ಲಿಸಿದಾಗ ಸಮಾಜ ಅವರನ್ನು ಗೌರವಿಸುತ್ತದೆ. ಜೊತೆಗೆ ಉನ್ನತ ಸ್ಥಾನಮಾನಗಳನ್ನು ದೊರಕಿಸಿಕೊಡುತ್ತದೆ. ಮಹಾಲಿಂಗೇಗೌಡ ಕಷ್ಟಪಟ್ಟು ಜೀವನದಲ್ಲಿ ಉತ್ತಮ ಸ್ಥಾನಕ್ಕೆ ಬಂದಿದ್ದಾರೆ. ಅವರು ಅನುಭವಿಸಿದ ಕಷ್ಟಗಳಿಗೆ ಒಳ್ಳೆಯ ಪ್ರತಿಫಲ ದೊರಕಿದೆ. 13 ಸಾವಿರ ಜನರಿಗೆ ಉದ್ಯೋಗ ಕೊಡುವುದು ಸುಲಭವಲ್ಲ. ನಿರುದ್ಯೋಗ ಸಮಸ್ಯೆಗೆ ತಮ್ಮ ಕೈಲಾದಷ್ಟು ಪರಿಹಾರವನ್ನು ದೊರಕಿಸುವ ಕೆಲಸ ಮಾಡುತ್ತಾ, ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿರುವ ಅವರ ಸಾಮಾಜಿಕ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಚಂದ್ರವನ ಆಶ್ರಮದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಘವೇಂದ್ರ ಮುದ್ದನಘಟ್ಟ ಇತರರಿದ್ದರು.

ಕಾರ್ಯಕ್ರಮದಲ್ಲಿ ರೈತರಿಗೆ ತೆಂಗಿನ ಸಸಿ ವಿತರಣೆ, ಒಂದು ಸಾವಿರ ಹೆಲ್ಮೆಟ್ ವಿತರಣೆ, 50ಕ್ಕೂ ಹೆಚ್ಚು ಸಂಸ್ಥೆಗಳಿಂದ ಉದ್ಯೋಗ ಮೇಳ, ಪಶ್ಚಿಮ ಠಾಣೆ ಪೊಲೀಸರಿಗೆ ಜರ್ಕೀನ್ ವಿತರಣೆ, ಪ್ರಗತಿಪರ ರೈತರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ, ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ತೆರೆದ ವಾಹನದಲ್ಲಿ ಮಹಾಲಿಂಗೇಗೌಡ ನೇತೃತ್ವದಲ್ಲಿ ಸ್ವಾಮೀಜಿಗಳನ್ನು ಮೆರವಣಿಗೆ ಮೂಲಕ ಅಂಬೇಡ್ಕರ್ ಭವನಕ್ಕೆ ಕರೆದುಕೊಂಡು ಬರಲಾಯಿತು.

ನನ್ನ ಜೀವನದಲ್ಲಿ ಸಮಾಜ ಸೇವೆಯನ್ನು ಮುಖ್ಯ ಗುರಿಯಾಗಿಸಿಕೊಂಡಿದ್ದೇನೆ. ಅದನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ಅದಕ್ಕೆ ಎಲ್ಲ ವರ್ಗದ ಜನರಿಂದ ನನಗೆ ಉತ್ತಮ ಸಹಕಾರ ದೊರೆಯುತ್ತಿದೆ. ಉದ್ಯಮದಲ್ಲಿ ಬೆಳವಣಿಗೆ ಕಾಣುವ ಜತೆಯಲ್ಲೇ ಸಮಾಜಕ್ಕೆ ಏನಾದರೂ ಸೇವೆ ಸಲ್ಲಿಸಬೇಕೆಂಬ ಹಂಬಲದೊಂದಿಗೆ ನನ್ನಿಂದಾದ ಸಹಾಯ ಮಾಡುತ್ತಿದ್ದೇನೆ. ಈ ಸೇವೆಯ ಹಿಂದೆ ಯಾವುದೇ ಸ್ವಾರ್ಥ ಇಲ್ಲ. ಮುದ್ದನಘಟ್ಟ ಮಹಾಲಿಂಗೇಗೌಡ ಉದ್ಯಮಿ