ಮಂಡ್ಯ: ದಕ್ಷಿಣ ಭಾರತವನ್ನಾಳಿದ ಕದಂಬ, ಚಾಲುಕ್ಯ ಮತ್ತು ರಾಷ್ಟ್ರಕೂಟ ರಾಜಮನೆತನಗಳ ಕೊಡುಗೆ ಅವಿಸ್ಮರಣೀಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿದರು.
ನಗರದ ಗಾಂಧಿಭವನದಲ್ಲಿ ಕದಂಬ ಸೈನ್ಯ ಕನ್ನಡ ಸಂಘಟನೆಯಿಂದ ಆಯೋಜಿಸಿದ್ದ ಕದಂಬ, ಚಾಲುಕ್ಯ, ರಾಷ್ಟ್ರಕೂಟ ಚಕ್ರವರ್ತಿಗಳ ಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡಿಗರ ಸ್ವಾಭಿಮಾನದ ರಾಜಮನೆತನ ಕದಂಬರು ಕ್ರಿ.ಶ.4ನೇ ಶತಮಾನದಲ್ಲಿ ಬನವಾಸಿಯನ್ನು ಕೇಂದ್ರವಾಗಿಟ್ಟುಕೊಂಡು ಅಭೂತ್ವಪೂರ್ವ ಆಳ್ವಿಕೆ ನಡೆಸಿ ಕೊಡುಗೆ ನೀಡಿದರು. ಚಾಲುಕ್ಯರು 6ನೇ ಶತಮಾನದಲ್ಲಿ ಬಾದಾಮಿಯನ್ನು ಕೇಂದ್ರವಾಗಿಟ್ಟುಕೊಂಡು ಆಳ್ವಿಕೆ ನಡೆಸಿದರು. ರಾಷ್ಟ್ರಕೂಟರು 8ನೇ ಶತಮಾನದಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರವನ್ನು ಕೇಂದ್ರವಾಗಿಟ್ಟುಕೊಂಡು ಆಳ್ವಿಕೆ ನಡೆಸಿದರು. ಈ ಮೂರು ರಾಜವಂಶ ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ನುಡಿದರು.
ಇಂದಿನ ವಿದ್ಯಾವಂತರು ಇತಿಹಾಸವನ್ನು ಮರೆಯಬಾರದು. ಅಂತೆಯೇ ಹಿಂದಿನ ರಾಜಮನೆತನಗಳನ್ನು ಸ್ಮರಿಸಿಕೊಳ್ಳುವ ಕೆಲಸ ಆಗುತ್ತಿರುವುದು ಶ್ಲಾಘನೀಯ. ಕದಂಬರು ಪ್ರಾಚೀನ ದಕ್ಷಿಣ ಭಾರತದ ಪ್ರಮುಖ ರಾಜವಂಶ. ಕ್ರಿ.ಶ. 4ನೇ ಶತಮಾನದಲ್ಲಿ ಮಯೂರವರ್ಮನು ಗುರು ಹಿರಿಯರ ಸಹಾಯದೊಂದಿಗೆ ಸಾಮಾಜ್ಯವನ್ನು ಸ್ಥಾಪಿಸಿದನು. ಕದಂಬರ ರಾಜಧಾನಿ ಇಂದಿನ ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಪ್ರಾಂತ್ಯವಾಗಿತ್ತು. ಕದಂಬರು ಕನ್ನಡ ಭಾಷೆಗೆ ರಾಜಮರ್ಯಾದೆ ನೀಡಿದ ಪ್ರಥಮ ರಾಜವಂಶಸ್ಥ. ಇವರ ಆಳ್ವಿಕೆ ಸಮಯದಲ್ಲಿ ಕನ್ನಡದ ಆಡಳಿತ ಪ್ರಾರಂಭವಾಯಿತು. ಇನ್ನು ಇಮ್ಮಡಿ ಪುಲಿಕೇಶಿ ಆಡಳಿತದಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿದರು. ರಾಷ್ಟ್ರಕೂಟರು ದಕ್ಷಿಣ ಭಾರತದ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಪ್ರೋತ್ಸಾಹ ನೀಡಿದ್ದರು. ಎಂದು ಸ್ಮರಿಸಿದರು.
ಕದಂಬ ಸೈನ್ಯ ಕನ್ನಡ ಸಂಘಟನೆ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಮಾತನಾಡಿ, ಕಾವೇರಿ ಚಳವಳಿ ಮತ್ತು ಕನ್ನಡಪರ ಪ್ರತಿಭಟನೆಯಲ್ಲಿ ಹೋರಾಟರ ರಕ್ಷಣೆ ಮಾಡುವಲ್ಲಿ ಪೊಲೀಸ್ ಇಲಾಖೆ ತನ್ನ ಪಾತ್ರವನ್ನು ಅವಿಸ್ಮರಣೀಯವಾಗಿ ನಿರ್ವಹಿಸಿದೆ. ಸಾಕಷ್ಟು ಬಾರಿ ಹೋರಾಟಗಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದರೂ ತಾಳ್ಮೆಯಿಂದ ಕರ್ತವ್ಯ ನಿಭಾಯಿಸಿದ್ದಾರೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಸಮಾಜ ಸೇವಕ ಡಾ.ಎನ್.ನರಸಿಂಹಮೂರ್ತಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ವಿಶಾಲ್‌ರಘು, ಸಮಾಜ ಸೇವಕ ನೋಕಿಯಾ ಎಂ.ಜೆ.ಯೋಗೇಶ್, ಜ್ಯೂನಿಯರ್ ಮಾಲಾಶ್ರೀ ಖ್ಯಾತಿಯ ಕೆ.ಟಿ.ಸೌಭಾಗ್ಯಾ, ಎಎಸ್‌ಪಿಗಳಾದ ಸಿ.ಈ.ತಿಮ್ಮಯ್ಯ, ಗಂಗಾಧರಸ್ವಾಮಿ, ವಕೀಲೆ ಆಶಾಲತಾ, ನಗರಸಭಾ ಸದಸ್ಯ ಶ್ರೀಧರ್, ಮೋಹನ್ ಚಿಕ್ಕಮಂಡ್ಯ, ಅನುಪಮಾಗೌಡ ಇತರರಿದ್ದರು. ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆ, ನಿವೃತ್ತ ಸೈನಿಕರು, ಸಮಾಜಸೇವಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.