ಮಂಡ್ಯ: ಸಾಹಿತಿಗಳು ತಮ್ಮ ಕಷ್ಟದ ಜೀವನದ ನಡುವೆಯೂ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಜಯಮಾರುತಿ ಹೇಳಿದರು.
ನಗರದ ಗಾಂಧಿಭವನದಲ್ಲಿ ಡಾ.ಜೀ.ಶಂ.ಪ ಸಾಹಿತ್ಯ ವೇದಿಕೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಯುವಸೇನೆ ಸಹಯೋಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ 31ನೇ ರಾಜ್ಯ ಮಟ್ಟದ ಕವಿಕಾವ್ಯ ಮೇಳ, ಅಮೃತ ಅಭಿನಂದನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಸಾಹಿತಿಗಳಿಂದ ಸಮಾಜ ಉದ್ಧಾರವಾಗಿದೆ. ಆದರೆ, ಅವರ ಮನೆ ಅಭಿವೃದ್ಧಿ ಆಗಿಲ್ಲ. ನೈಜ ಸಾಹಿತಿಗಳು ದುಸ್ತರ ಜೀವನವನ್ನೇ ನಡೆಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಬಣ್ಣಿಸಿದರು.
ಬೆಂಗಳೂರಿನಲ್ಲಿ ಕನ್ನಡವನ್ನು ಹುಡುಕಬೇಕಾದ ಪರಿಸ್ಥಿತಿ ಬಂದಿದೆ. ಹಿಂದಿ, ತಮಿಳು, ಇಂಗ್ಲಿಷ್ ಮಯವಾಗಿರುವ ಬೆಂಗಳೂರಿನಲ್ಲಿ ಶೇ.30ರಷ್ಟು ಜನ ಮಾತ್ರ ಕನ್ನಡ ಮಾತನಾಡುವವರಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ರಾಜ್ಯದ ವಿವಿಧ ಕಡೆ ಕೆಲಸ ಮಾಡಿರುವ ನನಗೆ, ಅತಿ ಹೆಚ್ಚು ಕನ್ನಡ ಮಾತನಾಡುವ ಜನರು ಮಂಡ್ಯ ಜಿಲ್ಲೆಯಲ್ಲಿ ಕಂಡುಬಂದರು. ನಮ್ಮ ಜಿಲ್ಲೆಯಲ್ಲಿ ಹೆಚ್ಚು ಕನ್ನಡ ಮಾತನಾಡುವವರಿರುವುದು ಹೆಮ್ಮೆಯ ಸಂಗತಿ ಎಂದರು.
ರಾಜ್ಯದಲ್ಲಿ ಜಾನಪದ ಸಾಹಿತ್ಯ ಉಳಿವಿಗೆ ಶ್ರಮಿಸಿದವರು ಜಾನಪದ ತಜ್ಞ ಡಾ.ಜಿ.ಶಂ.ಪರಮಶಿವಯ್ಯ. ಪ್ರಾಚೀನ ಕಾಲದ ಜಾನಪದ ಕಲೆ ಆಧುನಿಕ ಯುಗದಲ್ಲಿ ಪ್ರಸ್ತುತವಾಗಿದೆ ಎಂದರೆ ಅದನ್ನು ಉಳಿಸಿದ ಕೀರ್ತಿ ಡಾ.ಜಿ.ಶಂ.ಪ ಅವರಿಗೆ ಸಲ್ಲಬೇಕು ಎಂದರು.
ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಈ.ಸಿ.ನಿಂಗರಾಜ್‌ಗೌಡ ಮಾತನಾಡಿ, ಮೌಲ್ಯಯುತ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಿದಾಗ ಅದರ ಮೌಲ್ಯ ಹೆಚ್ಚಾಗುತ್ತದೆ. ಆ ನಿಟ್ಟಿನಲ್ಲಿ ಡಾ.ಜೀ.ಶಂ.ಪ ಸಾಹಿತ್ಯ ವೇದಿಕೆ ಉತ್ತಮ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಅಭಿನಂದನಾರ್ಹ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ ಮಾತನಾಡಿ, ಪ್ರತಿಯೊಬ್ಬರೂ ಸಾಹಿತ್ಯವನ್ನು ಓದಬೇಕು. ನಮ್ಮ ಭಾಷೆಯನ್ನು ಶ್ರೀಮಂತಗೊಳಿಸಬೇಕು. ಪ್ರಸ್ತುತ ಸಾಹಿತ್ಯಕ್ಕೂ ಹಿಂದಿನ ಸಾಹಿತ್ಯಕ್ಕೂ ಬಹಳ ವ್ಯತ್ಯಾಸವಿದೆ. ಈ ಹಿಂದೆ ಅನೇಕ ಸಾಹಿತಿಗಳು ಮೌಲ್ಯಯುತ ಸಾಹಿತ್ಯವನ್ನು ರಚಿಸುತ್ತಿದ್ದರು. ಆದರೆ, ಇಂದಿನ ಕವಿಗಳ ಸಾಹಿತ್ಯ ರಚನೆ ಮೌಲ್ಯಗಳಿಂದ ಕೂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮ್ಮೇಳನಾಧ್ಯಕ್ಷ ಅರಕೆರೆ ಪುರುಷೋತ್ತಮ್, ವೈದ್ಯರಾದ ಡಾ.ಚಂದ್ರಶೇಖರ್, ಡಾ.ಮಾದೇಶ್, ತಾಪಂ ಮಾಜಿ ಸದಸ್ಯ ಅರಕೆರೆ ಸಂತೋಷ್ ಕುಮಾರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಲುವೇಗೌಡ, ಡಾ.ಜೀಶಂಪ ಸಾಹಿತ್ಯ ವೇದಿಕೆಯ ಎಸ್.ಕೃಷ್ಣ ಸ್ವರ್ಣಸಂದ್ರ, ಮಂಗಲ ಶಿವಣ್ಣ, ಲೋಕೇಶ್ ಚಂದಗಾಲು ಉಪಸ್ಥಿತರಿದ್ದರು.