ಮಂಡ್ಯ: ಜನಮಾನಸದಲ್ಲಿ ಇಂದಿಗೂ ಜೀವಂತವಾಗಿರುವ ಟಿ.ತಿಮ್ಮೇಗೌಡ ಅವರು ಉತ್ತಮ ಅಡಳಿತ ನಡೆಸಿದ್ದಾರೆ. ಕಾನೂನು ಪ್ರಕಾರವೇ ಜನಮುಖಿ ಸೇವೆ ನೀಡಿ ಎಲ್ಲರ ಮನಸ್ಸಲ್ಲಿ ಉಳಿದವರು. ಮುಖ್ಯವಾಗಿ ಎಂದಿಗೂ ಅಧಿಕಾರದ ಅಹಂ ತಲೆಗೆ ಹತ್ತಿಸಿಕೊಂಡವರಲ್ಲ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಶ್ಲಾಘಿಸಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದ್ದ ಟಿ.ತಿಮ್ಮೇಗೌಡ ಜನಮುಖಿ ಆಡಳಿತ ಪ್ರಶಸ್ತಿ, ಲಿಂಗಮ್ಮ ದೊಡ್ಡಿತಿಮ್ಮೇಗೌಡ ಕೃಷಿಕ ಪ್ರಶಸ್ತಿ, ಎಂ.ಆರ್.ಶಶಿಕಲಾ ಟಿ.ತಿಮ್ಮೇಗೌಡ ವಿದ್ಯಾರ್ಥಿ ಪುರಸ್ಕಾರದ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಅಧಿಕಾರದಲ್ಲಿದ್ದ ತಿಮ್ಮೇಗೌಡ ಅವರು ಹಣದ ಹಿಂದೆ ಹೋದವರಲ್ಲ. ಶ್ರೀಮಠದ ಭಕ್ತರಾಗಿರುವ ಅವರು ಜನಾನುರಾಗಿ ಕೆಲಸ ಮಾಡಿ ಸೈ ಎನಿಸಿಕೊಂಡ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ, ಅವರ ಸೇವೆ ಈ ಕಾರ್ಯಕ್ರಮದ ಮೂಲಕ ಮುಂದುವರಿಯಲಿ. ಬೆಂಗಳೂರು ನಗರದಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸುವುದು ಕಷ್ಟ. ಆದರೆ ದಯಾನಂದ ಅವರಿಗೆ ಎರಡು ಬಾರಿ ಅಧಿಕಾರ ಸಿಕ್ಕಿದೆ. ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ನಂಜೇಗೌಡ ಅವರಿಗೆ ಪ್ರಶಸ್ತಿ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ತಿಮ್ಮೇಗೌಡ ಅವರು ಉತ್ತಮ ಅಧಿಕಾರಿ. ಗಾಂಧಿ ಗ್ರಾಮದ ಬಗ್ಗೆ ಅವರ ಅಧಿಕಾರದ ಅವಧಿಯಲ್ಲೇ ಸಲಹೆ ನೀಡಿದ್ದರು. ಅವರ ಜನಪರ ಸೇವೆ ಎಲ್ಲರೂ ಕಂಡಿದ್ದಾರೆ. ತಿಮ್ಮೇಗೌಡ ಅವರ ಹೆಸರಿನಲ್ಲಿ ಸಮಾಜಮುಖಿ ಪ್ರಶಸ್ತಿ ನೀಡುತ್ತಿರುವುದು ವಿಶೇಷ ಎನಿಸುತ್ತದೆ ಎಂದು ಶ್ಲಾಘಿಸಿದರು.
ಟಿ.ತಿಮ್ಮೇಗೌಡ ಜನಮುಖಿ ಆಡಳಿತ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬೆಂಗಳೂರು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಣ ಆಯುಕ್ತ ಕೆ.ಎ.ದಯಾನಂದ, ಜನಮುಖಿ ಆಡಳಿತ ನಡೆಸಿದ್ದ ತಿಮ್ಮೇಗೌಡ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನಗೆ ಆನಂದ ಉಂಟು ಮಾಡಿದೆ. ಮೈಸೂರು ಜಿಲ್ಲೆಯವನಾದರೂ ನನಗೂ ಮಂಡ್ಯಕ್ಕೂ ಅವಿನಾಭಾವ ಸಂಬಂಧ ಹೊಂದಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿವೃತ್ತ ಜಿಲ್ಲಾಧಿಕಾರಿ ಟಿ.ತಿಮ್ಮೇಗೌಡ ಮಾತನಾಡಿ, ಅಧಿಕಾರಿಗಳನ್ನು ಕೀಳಾಗಿ ಕಾಣುವುದು ಬೇಡ. ರಾಜಕಾರಣಿಗಳು ಅಧಿಕಾರ ಮುಗಿದ ಮೇಲೆ ನಿಷ್ಕ್ರಿಯಯಗೊಳ್ಳುತ್ತಾರೆ. ಆದರೆ ಅಧಿಕಾರಿಗಳು ನಿರಂತರವಾಗಿ ಇರುತ್ತಾರೆ. ಅವರನ್ನು ಗೌರವಯುತವಾಗಿ ಸಮಾಜದಲ್ಲಿ ಕಾಣಬೇಕಿದೆ. ಆದರೆ ಎಲ್ಲ ರಾಜಕಾರಣಿಗಳು ಕೆಟ್ಟವರಲ್ಲ ಮೌಲ್ಯ ಉಳಿಸಿಕೊಂಡ ರಾಜಕಾರಣಿಗಳಿದ್ದು ಇತರ ರಾಜಕಾರಣಿಗಳಿಗೆ ಮಾದರಿ ಆಗಲಿ ಎಂದರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಕೆಂಗೇರಿ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಉತ್ತರಾಧಿಕಾರಿ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಎಂ.ಆರ್.ಶಶಿಕಲಾ, ಪ್ರತಿಷ್ಠಾನದ ಅಧ್ಯಕ್ಷ ಎ.ಸಿ.ರಮೇಶ್, ಸಲಹೆಗಾರ ಎಚ್.ಎಂ.ವೆಂಕಟಪ್ಪ ಇತರರಿದ್ದರು.
ಇದೇ ವೇಳೆ ಟಿ.ತಿಮ್ಮೇಗೌಡ ಜನಮುಖಿ ಆಡಳಿತ ಪ್ರಶಸ್ತಿಯನ್ನು ಕೆ.ಎ.ದಯಾನಂದ, ಲಿಂಗಮ್ಮ ದೊಡ್ಡಿತಿಮ್ಮೇಗೌಡ ಕೃಷಿಕ ಪ್ರಶಸ್ತಿಯನ್ನು ಬಿ.ಎಂ.ನಂಜೇಗೌಡ ಅವರಿಗೆ ತಲಾ 25 ಸಾವಿರ ರೂ. ನಗದಿನ ಜತೆಗೆ ಪ್ರದಾನ ಮಾಡಲಾಯಿತು. ಎಂ.ಆರ್.ಶಶಿಕಲಾ ಟಿ.ತಿಮ್ಮೇಗೌಡ ವಿದ್ಯಾರ್ಥಿ ಪುರಸ್ಕಾರವನ್ನು ಕೆ.ಆರ್.ಪೇಟೆ ಧ್ರುತಿ, ಸೌಮ್ಯಾ, ಮೋನಿಷಾ ಅವರಿಗೆ ನೀಡಲಾಯಿತು.