ಜಿಲ್ಲೆ

ಕಲಾವಿದರಿಗೆ ಮಂಡ್ಯ ಉತ್ತಮ ವೇದಿಕೆ: ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಕೊಡುಗೆ ನೀಡಿರುವ ನಿತ್ಯಸಚಿವ ಕೆ.ವಿ.ಶಂಕರಗೌಡ ಅವರು ಇಂದಿಗೂ ಪ್ರಸ್ತುತವಾಗಿ ನಿಲ್ಲುತ್ತಾರೆ. ಮಂಡ್ಯ ಜಿಲ್ಲೆಯ ಕಲಾವಿದರು, ಸಾಹಿತಿಗಳಿಗೆ ಉತ್ತಮ ವೇದಿಕೆಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅಭಿಪ್ರಾಯಪಟ್ಟರು.

ನಗರದ ಗಾಂಧಿಭವನದಲ್ಲಿ ಕದಂಬ ಸೈನ್ಯ ಸಂಘಟನೆ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕದಂಬ ಜಿ.ಮಾದೇಗೌಡ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಕದಂಬ ಸೈನ್ಯ ಸಂಘಟನೆಯ ಮೂಲಕ ಹೆಸರುವಾಸಿಯಾಗಿರುವ ಬೇಕ್ರಿ ರಮೇಶ್ ಅವರು ರಾಜ್ಯದೆಲ್ಲೆಡೆ ಕನ್ನಡ ಭಾಷೆ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಇದರ ಜತೆಗೆ ಎಲೆಮರೆಕಾಯಿಯಂತಿರುವ ಸಾಧಕರನ್ನು ವೇದಿಕೆ ಮೇಲೆ ಕರೆತರುವ ಮೂಲಕ ಅವರಿಗೆ ಕದಂಬ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಕೆಲಸ ಎಂದು ತಿಳಿಸಿದರು.

ಎಸ್.ಬಿ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಕದಂಬ ಹೆಸರಿನಲ್ಲಿ ವಿವಿಧ ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವ ಕೆಲಸ ಮೆಚ್ಚುವಂತಾಗಿದೆ. ಸಮಾಜದಲ್ಲಿ ಸೇವೆ ಎಂಬ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕಿದೆ. ಕೇವಲ ಹಣ ಸಂಪಾದನೆಯಿಂದ ಗೌರವ ಪಡೆದುಕೊಳ್ಳುವುದಲ್ಲ. ಬಡವರು ಮತ್ತು ದೀನದಲಿತರ ಅಭಿವೃದ್ಧಿಗೆ ಶ್ರಮಿಸುವುದೇ ನಿಜವಾದ ಸೇವೆ ಎನ್ನುವುದು ಮುಖ್ಯವಾಗಬೇಕು ಎಂದು ಸಲಹೆ ನೀಡಿದರು.

ಕದಂಬ ಚಕ್ರೇಶ್ವರ ಮಯೂರ ವರ್ಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೈಸೂರು ವಿವಿ ಸೆನೆಟ್ ಮಾಜಿ ಸದಸ್ಯ ಈ.ಸಿ.ನಿಂಗರಾಜ್‌ಗೌಡ, ಕದಂಬ ವಂಶದಲ್ಲಿ ಮಯೂರ ವರ್ಮ ಒಬ್ಬ ಶ್ರೇಷ್ಟ ರಾಜ. ತಲಕಾಡಿನ ಗಂಗರು, ಹೊಯ್ಸಳ ವಂಶಸ್ಥರು ಕನ್ನಡ ಭಾಷೆಗೆ ಅವರದೇ ಕೊಡುಗೆ ನೀಡಿ ಹೋಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಕನ್ನಡಕ್ಕೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ ಸ್ಮರಿಸಿದರು.

ಸಾಹಿತಿ ಡಾ.ಪ್ರದೀಪಕುಮಾರ್‌ಹೆಬ್ರಿ, ನಗರಸಭೆ ಸದಸ್ಯ ಎಂ.ಎನ್.ಶ್ರೀಧರ್, ಸಂಘಟನೆಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಮುಖಂಡರಾದ ಉಮ್ಮಡಹಳ್ಳಿ ನಾಗೇಶ್, ಆರ್.ಎಸ್,ಹೇಮಂತ್‌ರಾಜ್, ಬಿ.ಎಸ್.ಅನುಪಮಾ ಇತರರಿದ್ದರು.

ಮಡಿಕೇರಿ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯಾಧೀಶರಾದ ರೇಣುಕಾಂಬ ಮತ್ತು ಬೆಂಗಳೂರು ಕೆಂಗೇರಿ ಉಪ ನೋಂದಣಾಧಿಕಾರಿ ಮಂಜುದರ್ಶಿನಿ(ಕದಂಬ ತವರು ಸನ್ಮಾನ), ದಂತ ತಜ್ಞ ಚಂದ್ರಶೇಖರ್(ಕದಂಬ ವೈದ್ಯ ರತ್ನ ಪ್ರಶಸ್ತಿ), ಗದಗ ಜಿಲ್ಲೆಯ ನರಗುಂದ ರೇವಣಪ್ಪ ಯಮನಪ್ಪ ಮಾದರ, ಯಲ್ಲಪ್ಪ ರುದ್ರಪ್ಪ ಶೀನಪ್ಪ, ಮೈಸೂರಿನ ಎನ್.ಬಾಲಕೃಷ್ಣ(ಕದಂಬ ಕಾವೇರಿ ಮಹದಾಯಿ ರತ್ನ ಪ್ರಶಸ್ತಿ), ಚಿಕ್ಕಪುಟ್ಟೇಗೌಡ, ಮಂಜುಳಾ ರವಿ, ಮಲ್ಲೇಶ್, ಸಚಿನ್, ಶೇಖರ್, ನಾಗರಾಜು, ದೇವಾನಂದ್, ಎಸ್.ಆರ್.ಶ್ರೀಧರ್ ಅವರಿಗೆ ಕದಂಬ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.