ಮಂಡ್ಯ: ರೈತರು ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಲಿ ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಸಲಹೆ ನೀಡಿದರು.
ನಗರದ ಕೆ.ವಿ.ಶಂಕರಗೌಡ ರೈತ ಸಭಾಂಗಣದಲ್ಲಿ ಕರ್ನಾಟಕ ಸಂಘದ ವತಿಯಿಂದ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಮಣ್ಣು, ನೀರು, ಗೊಬ್ಬರ ಹಾಗೂ ಬಿತ್ತನೆ ಬೀಜ ಬಳಸುವ ವಿಧಾನವನ್ನು ವೈಜ್ಞಾನಿಕವಾಗಿ ನಮ್ಮ ರೈತರು ಇನ್ನೂ ತಿಳಿದುಕೊಂಡಿಲ್ಲದ ಕಾರಣ ಕೃಷಿಯಲ್ಲಿ ಲಾಭ ಗಳಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೃಷಿ ಬಗ್ಗೆ ಕಾರ್ಯಾಗಾರವನ್ನು ಆಯೋಜಿಸಿ ಅವರಿಗೆ ಮಾಹಿತಿ ನೀಡುವ ಕೆಲಸ ತುರ್ತಾಗಿ ಆಗಬೇಕು ಎಂದರು.
ಶೈಕ್ಷಣಿಕ, ವೈಜ್ಞಾನಿಕ ಹಾಗೂ ತಾಂತ್ರಿಕವಾಗಿ ಬೆಳೆಯಬೇಕಿದೆ. ಇವೆಲ್ಲ ಬೆಳವಣಿಗೆಗಳ ನಡುವೆ ನಾವು ಅಳವಡಿಸಿಕೊಳ್ಳುವಲ್ಲಿ ನಾವು ಸೋತಿದ್ದೇವೆ. ಮಂಡ್ಯ ವಿ.ಸಿ ಫಾರ್ಮ್‌ನಲ್ಲಿ ಕೃಷಿಗೆ ಸಂಬಂಧಿಸಿದಂತೆ ಜಪಾನ್ ಸಂಸ್ಥೆ ಒಂದು ತರಬೇತಿ ನೀಡಿತ್ತು. ಮಂಡ್ಯ ಜಿಲ್ಲೆಯಲ್ಲಿ ವೈಜ್ಞಾನಿಕವಾಗಿ ಕೃಷಿ ಮಾಡುತ್ತಿಲ್ಲ ಎಂಬ ಮಾತುಗಳು ಬಂದಿತ್ತು. ಮಣ್ಣು, ನೀರು, ಯಂತ್ರೋಪಕರಣ, ಬೀಜ ರಸಗೊಬ್ಬರ ಬಳಕೆ ಸೇರಿದಂತೆ ಕೃಷಿ ಕ್ಷೇತ್ರದ ಬೆಳವಣಿಗೆಗೆ ರಚನಾತ್ಮಕ ಚರ್ಚೆ ಮಂಡ್ಯದಲ್ಲಿ ತುರ್ತಾಗಿ ನಡೆಯಬೇಕು ಎಂದು ಮನವಿ ಮಾಡಿದರು.
ನನಗೆ ಹಲವು ಪ್ರಶಸ್ತಗಳು ಬಂದಿವೆ, ಅದರ ಜತೆ ಹಣವೂ ಬಂದಿದೆ. ಇಲ್ಲಿಯತನಕ 10 ಲಕ್ಷ ರೂ.ಗೂ ಹೆಚ್ಚು ಹಣವನ್ನು ಸಂವಿಧಾನದ ಓದಿಗಾಗಿ ಖರ್ಚು ಮಾಡಿದ್ದೇನೆ. ಈಗ ಕೊಡುವ ಹಣವನ್ನು ಸಹ ನಾನು ಸಂವಿಧಾನ ಓದಿಗಾಗಿ ಖರ್ಚು ಮಾಡುವೆ. ಸಂವಿಧಾನವನ್ನು ಎಷ್ಟು ಜನ ಓದಿದ್ದೀರಾ ಅದನ್ನು ಅರ್ಥ ಮಾಡಿಕೊಂಡಿದ್ದೀರಾ ಎಂಬುನ್ನು ಅರಿತುಕೊಳ್ಳಬೇಕು. ದೇಶದಲ್ಲಿ ಸಮಸ್ಯೆಗಳು, ಸವಾಲುಗಳು ಇವೆ, ಇದೆಲ್ಲವನ್ನೂ ಸರಿದಾರಿಯಲ್ಲಿ ತೆಗೆದುಕೊಂಡು ಹೋಗುವುದು ಸಂವಿಧಾನ ಎಂದು ಪ್ರತಿಪಾದಿಸಿದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಶೇ.18ಕ್ಕಿಂತ ಕಡಿಮೆ ಅಕ್ಷರಸ್ಥರು ಇದ್ದರು. ಈಗ ಸರಿ ಸುಮಾರು ಶೇ.80 ರಷ್ಟು ಅಕ್ಷರಸ್ಥರಿದ್ದರೂ ಇವರೆಲ್ಲರೂ ಕಾನೂನು ಜ್ಞಾನ ಪಡೆದಿಲ್ಲ. ಕಾನೂನು ಗೊತ್ತಿಲ್ಲದೇ ಇರುವುದರಿಂದ ಸಂವಿಧಾನದಲ್ಲಿ ಹೇಳಿರುವ ಹಕ್ಕುಗಳನ್ನು ನಾವು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾವು ಹಕ್ಕುಗಳನ್ನು ಅನುಭವಿಸುವುದಕ್ಕೆ ಮೊದಲು ಸಂವಿಧಾನದ ಸಾಕ್ಷರತೆ ಮುಖ್ಯವಾಗಿ ಬೇಕಿದೆ ಎಂದು ಸಲಹೆ ನೀಡಿದರು.
ಕನಕಪುರ ರೂರಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಎಚ್.ಕೆ.ಶ್ರೀಕಂಠ ಮಾತನಾಡಿ, ಕೃಷಿಗೆ ಭವಿಷ್ಯವಿಲ್ಲ ಎನ್ನುವ ಜನರೇ ಹೆಚ್ಚಿದ್ದಾರೆ. ಈ ಹಿಂದೆ ಶೇ.80 ರಷ್ಟು ಇದ್ದ ರೈತರು ಪ್ರಸ್ತುತದಲ್ಲಿ ಶೇ.55ಕ್ಕೆ ಕುಸಿದಿದೆ. ನಮ್ಮ ಕೃಷಿಗೆ ಭವಿಷ್ಯವಿದೆ ಎಂಬುದಕ್ಕೆ ಇವರು ದೇಶದ 130 ಕೋಟಿ ಜನರಿಗೆ ಅನ್ನ ನೀಡುತ್ತಿರುವುದೇ ಸಾಕ್ಷಿಯಾಗಿದೆ. ಇದು ಮತ್ತಷ್ಟು ಹೆಚ್ಚಾಗಬೇಕಿದೆ ಎಂದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಹೈಕೋರ್ಟ್ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ, ಮದ್ದೂರಿನಲ್ಲಿ ನ್ಯಾಯಾಧೀಶರಾಗಿ ಕೆಲಸ ಮಾಡಲು ಬಂದಾಗ ಸುಮಾರು 12 ಸಾವಿರ ಪ್ರಕರಣಗಳಿದ್ದವು. ಅದರಲ್ಲಿ ರೈತರ ಪ್ರಕರಣಗಳನ್ನು ಸೇರಿದಂತೆ ಹಲವು ಪ್ರಕರಣಗಳನ್ನು ಇತ್ಯರ್ಥಗೊಳಿಸಿರುವ ಸಮಾಧಾನವಿದೆ. ಮದ್ದೂರಿನಿಂದ ವರ್ಗಾವಣೆಗೊಂಡಾಗ ಅಂದಿನ ಕೊನೆಯ ತೀರ್ಪು ನೀಡಿ ಪ್ರಕರಣದಿಂದ ಬಿಡುಗಡೆಗೊಳಿಸಿದ್ದು, ಅಂದಿನ ಶಾಸಕರಾಗಿದ್ದ ರೈತ ಹೋರಾಟಗಾರ ಕೆ.ಎಸ್.ಪುಟ್ಟಣ್ಣಯ್ಯ ಅವರದ್ದಾಗಿತ್ತು. ಜತೆಗೆ ಕೇವಲ 12,200 ಪ್ರಕರಣಗಳಲ್ಲಿ ಕೇವಲ 419 ಮಾತ್ರ ಉಳಿಸಿ ಮಿಕ್ಕೆಲ್ಲ ಪ್ರಕರಣಗಳನ್ನು ಇತ್ಯರ್ಥಗೊಳಿಸಿರುವುದು ಹೆಮ್ಮೆ ಎನಿಸಿತ್ತು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತಿ ಮ.ರಾಮಕೃಷ್ಣ ಅಭಿನಂದನಾ ನುಡಿಯಾಡಿದರು. ಪ್ರಭಾವತಿ ಹನುಮೇಗೌಡ ಕುಟುಂಬದಿಂದ ಎಂ.ಎಸ್.ಹರೀಶ್, ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಚಂದಗಾಲು ಲೋಕೇಶ್, ಕಾರ್ಯದರ್ಶಿ ಹರೀಶ್‌ಕುಮಾರ್ ಭಾಗವಹಿಸಿದ್ದರು.
ಇದೇ ವೇಳೆ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್(ಕಾನೂನು ಸೇವಾ ಪ್ರಶಸ್ತಿ ಜತೆಗೆ 20 ಸಾವಿರ ರೂ), ಶ್ರೀರಂಗಪಟ್ಟಣ ತಾಲೂಕು ಗಂಜಾಂ ಗ್ರಾಮದ ಪ್ರಗತಿಪರ ಕೃಷಿಕ ಚಂದ್ರಶೇಖರ್(ಕೃಷಿ ಪ್ರಶಸ್ತಿ ಜತೆಗೆ 20 ಸಾವಿರ ರೂ), ಮಂಡ್ಯ ತಾಲೂಕು ದೊಡ್ಡಬಾಣಸವಾಡಿ ಆಯುಷ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಅಂಬಿಕಾ (ವೈದ್ಯಕೀಯ ಪ್ರಶಸಿ ಜತೆಗೆ 20 ಸಾವಿರ ರೂ), ಕನಕಪುರ ತಾಲೂಕಿನ ಪ್ರಗತಿಪರ ರೈತ ಮಹಿಳೆ ಬಿ.ಕೆ.ಪದ್ಮಾ(ಕೃಷಿ ಪ್ರಶಸ್ತಿ ಜತೆಗೆ 10 ಸಾವಿರ ರೂ), ಮದ್ದೂರು ತಾಲೂಕು ಚಾಮನಹಳ್ಳಿ ಪ್ರಗತಿಪರ ಕೃಷಿಕ ಪ್ರೊ.ಎಂ.ಸಿ.ಬೋರೇಗೌಡ(ಕೃಷಿ ಪ್ರಶಸ್ತಿ ಜತೆಗೆ 10 ಸಾವಿರ ರೂ) ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದ್ಯಾರ್ಥಿ ಪ್ರತಿಭಾ ಪುರಸ್ಕಾರಕ್ಕೆ ವಕೀಲ ಪಿ.ಮಂಜುನಾಥ್ ಹಾಗೂ ಮಂಡ್ಯ ಕಾನೂನು ಕಾಲೇಜಿನ ವಿದ್ಯಾರ್ಥಿ ಜಿ.ಎಸ್.ಚೈತ್ರಾ ಅವರಿಗೆ ತಲಾ 5 ಸಾವಿರ ರೂ ನೀಡಲಾಯಿತು.