ಮಂಡ್ಯ: ಉತ್ತರ ಭಾರತದ ರಾಜ್ಯಗಳು ಅಭಿವೃದ್ಥಿಪಥದತ್ತ ಸಾಗುತ್ತಿವೆ. ಅದೇ ಮಾದರಿಯಲ್ಲಿ ಮಂಡ್ಯ ನಗರ ಅಭಿವೃದ್ಧಿಯಾಗಬೇಕು. ಇದಕ್ಕೆ ಎಲ್ಲರೂ ಪಕ್ಷಾತೀತವಾಗಿ ಕೈ ಜೋಡಿಸಬೇಕು ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮನವಿ ಮಾಡಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘದ ವತಿಯಿಂದ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಚುನಾವಣೆ ಆಗುವವರೆಗೆ ಮಾತ್ರ ರಾಜಕೀಯ. ನಂತರದ ದಿನಗಳಲ್ಲಿ ಅಭಿವೃದ್ಧಿ ವಿಚಾರಕ್ಕೆ ಎಲ್ಲರೂ ಕೈ ಜೋಡಿಸುವ ರೀತಿಯಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅವರು ರೈತ ಸಭಾಂಗಣ ನವೀಕರಣಕ್ಕೆ ಮನವಿ ಮಾಡಿದ್ದರು. ಅದರಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿಕೊಟ್ಟು ನವೀಕರಣಕ್ಕೆ ಅಗತ್ಯ ಸಹಕಾರ ನೀಡುವಂತೆ ಕೋರಿದ್ದೆವು. ಅದರಂತೆ 4.23 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಸಭಾಂಗಣದ ಆವರಣದಲ್ಲೇ ಪ್ರವಾಸಿ ಮಂದಿರವೊಂದು ಇದ್ದು, ಅದರ ನವೀಕರಣ ಸಹ ಆಗಬೇಕಿದೆ ಎಂದು ತಿಳಿಸಿದ್ದರ ಮೇರೆಗೆ 5 ಕೋಟಿ ರೂ ಕೊಡಲು ಸಿದ್ಧನಿದ್ದೇನೆ. ಎಲ್ಲವೂ ಅಚ್ಚುಕಟ್ಟಾಗಿ ಗುಣಮಟ್ಟದ ಕಾಮಗಾರಿ ನಡೆಸುವಂತೆ ಸಚಿವರು ಸಲಹೆ ನೀಡಿದ್ದಾರೆ. ಅದರಂತೆ ಅ.22ರಂದು ಹೈದರಾಬಾದ್‌ನಿಂದ ಐಸಿಡಿಸಿ ಅಧ್ಯಕ್ಷರು ಇಲ್ಲಿಗೆ ಬಂದು ಜಿಲ್ಲಾಧಿಕಾರಿಗೆ ಚೆಕ್ ಹಸ್ತಾಂತರ ಮಾಡುತ್ತಾರೆ. ಒಟ್ಟಾರೆ ಮಂಡ್ಯ ನಗರಕ್ಕೆ ಒಳ್ಳೆಯ ಕೆಲಸ ಆಗಬೇಕು. ಇದರಲ್ಲಿ ಅಸಮಾಧಾನಪಟ್ಟುಕೊಳ್ಳುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಯ ಜನರು ಕುಮಾರಸ್ವಾಮಿ ಅವರಿಗೆ ಶಕ್ತಿ ತುಂಬಿದ್ದಾರೆ. ಅದರಿಂದಾಗಿ ಅವರು ಕೇಂದ್ರದಲ್ಲಿ ಮಂತ್ರಿಯಾಗಿ ರಾಜ್ಯ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮಂಡ್ಯದಲ್ಲಿ ಉದ್ಯೋಗ ಮೇಳ ನಡೆಸಿ ಗ್ರಾಮಾಂತರ ಪ್ರದೇಶದ ಯುವಜನರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಹಸ್ರಾರು ಜನರಿಗೆ ಉದ್ಯೋಗ ಸಿಕ್ಕಿದೆ. ಸಿಗದಿದ್ದವರಿಗೂ ಕೆಲಸ ಕೊಡಿಸುವ ಭರವಸೆಯನ್ನು ಎಚ್‌ಡಿಕೆ ನೀಡಿದ್ದಾರೆ. ಅದರ ಬಗ್ಗೆ ನಾವೂ ಸಹ ನಿಗಾ ವಹಿಸಿದ್ದೇವೆ. ಎಲ್ಲರಿಗೂ ಉದ್ಯೋಗ ಕೊಡಿಸುವುದು ನಿಶ್ಚಿತ ಎಂದು ಭರವಸೆ ನೀಡಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು, ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಕಾರ್ಯದರ್ಶಿ ಚಂದಗಾಲು ಲೋಕೇಶ್ ಇತರರಿದ್ದರು.
ಇದೇ ವೇಳೆ ಪಾಂಡವಪುರದ ವಿದ್ಯಾಪ್ರಚಾರ ಸಂಘದ ಗೌರವ ಕಾರ್ಯದರ್ಶಿ ಕೆ.ವಿ.ಬಸವರಾಜು ಅವರಿಗೆ ಬಿ.ಎಚ್.ಮಂಗೇಗೌಡ ಶಿಕ್ಷಣ ಪ್ರಶಸ್ತಿ, ಮಂಗಲ ಯೋಗೀಶ್ ಅವರಿಗೆ ನಂಜಮ್ಮ ಮೋಟೇಗೌಡ ಸಮಾಜ ಸೇವಾ ಪ್ರಶಸ್ತಿ, ಮೈಸೂರು ಮಹಾರಾಣಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ. ಸೋಮಣ್ಣ ಅವರಿಗೆ ಕೆ.ಟಿ.ಶ್ರೀಕಂಠೇಗೌಡ ಶಿಕ್ಷಕ ಪ್ರಶಸ್ತಿ ಜತೆಗೆ ತಲಾ 15 ಸಾವಿರ ರೂ ನಗದು ನೀಡಿ ಗೌರವಿಸಲಾಯಿತು. ಅಂತೆಯೇ ಮದ್ದೂರು ತಾಲೂಕು ಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಾದ ಎನ್.ಆರ್.ಯಶಸ್ವಿನಿ, ಯಾಸ್ಮಿನ್‌ತಾಜ್ ಮತ್ತು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಟಿ.ಕೆ.ಅಮೃತಾ, ಮನುಜಾ ಅವರಿಗೆ ನಗದು ಪುರಸ್ಕಾರ ನೀಡಲಾಯಿತು.