ಜಿಲ್ಲೆ

ಸೇವೆ ಬದಲಿಗೆ ಹಣಕ್ಕೆ ಪೂಜೆ: ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ವಿಷಾದ

ಮಂಡ್ಯ: ಬಾಚಿಕೊಳ್ಳುವವರೇ ಸಮಾಜದಲ್ಲಿ ಹೆಚ್ಚಿರು ಸಂದರ್ಭದಲ್ಲಿ ಬಡಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಮನಸ್ಸುಗಳು ಇರುವುದನ್ನು ಈ ಕಾರ್ಯಕ್ರಮ ತೋರಿಸುತ್ತದೆ ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ, ಪಟೇಲ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ 4ನೇ ವರ್ಷದ ವೀರಸೈನಿಕ ಆರ್.ಲೋಕೇಶ್ ಪಟೇಲ್ ಜ್ಞಾಪಕಾರ್ಥ ವಿದ್ಯಾರ್ಥಿ ಪುರಸ್ಕಾರ ಹಾಗೂ ನಿಂಗಮ್ಮ ಪಟೇಲರ ಜೋಗಿಗೌಡ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಗುಣ, ನ್ಯಾಯ, ಸೇವೆಯನ್ನು ಪೂಜೆ ಮಾಡುವ ಕಾಲದಲ್ಲಿ ನಾವಿಲ್ಲ. ಬದಲಿಗೆ ಹಣವನ್ನು ಪೂಜೆ ಮಾಡುವ ಕಾಲವಾಗಿದೆ. ಇಂತಹವರ ಮಧ್ಯೆ ನಾಗಮ್ಮ ಮತ್ತು ಜೆ.ರಾಜಶೇಖರಯ್ಯ ಅವರು ಇರುವುದೇ ಬರಗಾಲದಲ್ಲಿ ಮಳೆ ಬಂದಂತೆ ಎಂದು ಶ್ಲಾಸಿದರು.

ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ರಾಷ್ಟ್ರ ಧ್ವಜ ಹಾರಾಡುತ್ತಿದೆ ಎಂದರೆ ಅದು ಗಾಳಿ ಬೀಸುತ್ತಿರುವುದಕ್ಕೆ ಹಾರಾಡುತ್ತಿದೆ ಎನ್ನುವುದಲ್ಲ. ಅದು ಸೈನಿಕರು ವೀರ ಮರಣವನ್ನಪ್ಪುವ ಸಂದರ್ಭದಲ್ಲಿ ಉಸಿರು ಬಿಟ್ಟರಲ್ಲ, ಅದರಿಂದ ಧ್ವಜ ಹಾರುತ್ತಿದೆ ಎಂಬುದಾಗಿರುತ್ತದೆ. ನಾವು ಉಸಿರಾಡುತ್ತಿರುವುದೇ ಇಂತಹ ಲಕ್ಷಾಂತರ ಸೈನಿಕರು ನಮಗರಿವಿಲ್ಲದಿಯೇ ಉಸಿರು ಚೆಲ್ಲಿದ ಕಾರಣಕ್ಕಾಗಿ ಎಂಬುದನ್ನು ಪ್ರತಿಯೊಬ್ಬರೂ ಭಾವಿಸಬೇಕಿದೆ ಎಂದು ತಿಳಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಘದ ನಿರ್ದೇಶಕ ಜಯರಾಮ್ ಕೋಣನಹಳ್ಳಿ, ಪಟೇಲ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ನಾಗಮ್ಮ, ಕಾರ್ಯದರ್ಶಿ ಜೆ.ರಾಜಶೇಖರಯ್ಯ ಇದ್ದರು.

ಇದೇ ವೇಳೆ ಪಟೇಲ್ ಚಾರಿಟಬಲ್ ಟ್ರಸ್ಟ್‌ನಿಂದ ವೀರ ಸೈನಿಕ ಆರ್.ಲೋಕೇಶ್ ಜ್ಞಾಪಕಾರ್ಥ ಕೊಡಮಾಡುವ ನಾಲ್ಕನೇ ವರ್ಷದ ವಿದ್ಯಾರ್ಥಿ ಪುರಸ್ಕಾರದ ಅಂಗವಾಗಿ ಮೈಸೂರಿನ ವೈದ್ಯಕೀಯ ಸಂಸ್ಥೆಯ ಭಗವಂತ್ರಾಯ ಕಲ್ಲೂರ, ಕೆ.ಆರ್.ಪೇಟೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಶಂಕರ ಬಳಗಾನೂರು, ಹಾಸನ ಪಶು ವೈದ್ಯಕೀಯ ಸಂಸ್ಥೆಯ ಎಂ.ವಿ.ಜನನಿ, ಬೆಂಗಳೂರು ಕೃಷ್ಣದೇವರಾಯ ದಂತ ವೈದ್ಯಕೀಯ ಕಾಲೇಜಿನ ಡಿ.ಎಸ್.ರಾಹುಲ್, ಮಂಡ್ಯ ವಿ.ಸಿ ಫಾರ್ಮ್ ಕೃಷಿ ವಿಜ್ಞಾನ ಸಂಸ್ಥೆಯ ತಾಜುದ್ದೀನ್ ಮತ್ತು ಮೈಸೂರು ಎನ್‌ಐಇ ಇಂಜಿನಿಯರಿಂಗ್ ಕಾಲೇಜಿನ ಸುಶ್ಮಿತಾ ಆಗೂ ಮೊದಲ ವರ್ಷದ ನಿಂಗಮ್ಮ ಪಟೇಲರ ಜೋಗಿಗೌಡ ಕೃಷಿ ಪ್ರಶಸ್ತಿಗೆ ನಾಗಮಂಗಲ ತಾಲೂಕು ತಟ್ಟಹಳ್ಳಿ ಗ್ರಾಮದ ದಂಪತಿ ಟಿ.ಕೆ.ಶಿವರಾಮು ಮತ್ತು ಜ್ಯೋತಿ ದಂಪತಿಗೆ ತಲಾ 25 ಸಾವಿರ ರೂ ನಗದು ನೀಡಲಾಯಿತು. ಇದಲ್ಲದೆ ಸಮಾರಂಭದ ಅಂಗವಾಗಿ ವೈಚಾರಿಕ ಕೃತಿ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ 10 ಜನ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.