ಜಿಲ್ಲೆ

ಮಂಡ್ಯದ ಜನರಲ್ಲಿ ಹಾಸುಹೊಕ್ಕಾಗಿರುವ ಅಭಿಮಾನ: ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ

ಕೆ.ಎನ್.ರಾಘವೇಂದ್ರ

ಮಂಡ್ಯ: ಮಂಡ್ಯ ಜಿಲ್ಲೆಯ ಜನರಲ್ಲಿ ನಾಡು, ನುಡಿ, ನೆಲ ಜಲ ಎನ್ನುವ ಅಭಿಮಾನ ಹಾಸುಹೊಕ್ಕಾಗಿದೆ ಎಂದು ಮಾಜಿ ಸಿಎಂ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಿಸಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಜನದನಿ ಸಾಂಸ್ಕೃತಿಕ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 27ನೇ ವರ್ಷದ ದೇವಮ್ಮ ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ಹಾಗೂ ಎಚ್.ಶಾರದಮ್ಮ ಮತ್ತು ಕೆಂಪಯ್ಯ ವಿದ್ಯಾರ್ಥಿ ಪುರಸ್ಕಾರ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಜಿಲ್ಲೆಯ ಜನರು ತಮ್ಮ ನೆಲೆಗಟ್ಟಿಗಾಗಿ ಸಂಘರ್ಷವನ್ನೂ ಮಾಡುತ್ತಾರೆ, ಪ್ರೀತಿಯನ್ನೂ ತೋರುತ್ತಾರೆ. ಮಂಡ್ಯ ಎಂದರೆ ಇಂಡಿಯಾ ಎನ್ನುವ ಮಾತಿದೆ. ಆದರೆ ಇಂಡಿಯಾಗಿಂತಲೂ ಹೆಚ್ಚು ಎಂಬುದು ನನ್ನ ಭಾವನೆ. ಇರ್ವಿನ್ ನಾಲೆಗಾಗಿ ಹೋರಾಡಿದ ಇಂಡುವಾಳು ಹೊನ್ನಯ್ಯ ಅವರ ಕುಟುಂಬದಲ್ಲೂ ಈ ಮಣ್ಣಿನ ಗುಣವಿದೆ. ಕರ್ನಾಟಕದ ಏಕೀಕರಣಕ್ಕೂ ಮಂಡ್ಯದ ಕೊಡುಗೆ ಅಪಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆಳ್ವಿಕೆಗೂ ಆಡಳಿತಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಆಳುವವರು(ರಾಜಕಾರಣಿಗಳು) ಆಡಳಿತ ನಡೆಸಲು ಹೋಗುತ್ತಿದ್ದಾರೆ. ಆಡಳಿತ ಮಾಡಬೇಕಾದ ಅಧಿಕಾರಿಗಳು ಆಳುವವರ ಬಾಲಂಗೋಚಿಗಳಾಗಿದ್ದಾರೆ. ಇದು ಅದಲು-ಬದಲಾಗಬಾರದು. ‘ರೈತರು ಉದ್ಧಾರವಾದರೆ ದೇಶ ಉದ್ಧಾರವಾಗುತ್ತದೆ’ ಎಂದು ನನ್ನ ತಾಯಿ ಹೇಳುತ್ತಿದ್ದರು. ಅಮ್ಮನ ಮಾತೇ ರೈತಪರವಾದ ಕಾರ್ಯಕ್ರಮ ರೂಪಿಸಲು ನನಗೆ ಪ್ರೇರಣೆಯಾಯಿತು. ರೈತರ ಮಕ್ಕಳು ಎಲ್ಲ ರಂಗಗಳಲ್ಲೂ ಬೆಳೆಯಬೇಕು. ಇದು ಜ್ಞಾನದ ಯುಗವಾಗಿದ್ದು, ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಸಿಗಲಿ ಎಂದು ಅಭಿಪ್ರಾಯಪಟ್ಟರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ, ವಿಶ್ವವಿದ್ಯಾಲಯಗಳು ಬೋಧನೆ, ಕಲಿಕೆ, ಮೌಲ್ಯಮಾಪನ, ಸಂಶೋಧನೆಗೆ ಮಾತ್ರ ಸೀಮಿತವಾಗಿವೆ. ಸಮಾಜಸೇವೆಗೆ ಆದ್ಯತೆ ನೀಡುತ್ತಿಲ್ಲ. ತರಗತಿಗಳಲ್ಲಿ ಬೋಧಿಸುವ ಪಾಠಗಳಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಿ, ಸಮಾಜಕ್ಕೆ ಕೊಡುಗೆ ನೀಡಲಿ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ಮಂಡ್ಯ ನಗರದಲ್ಲಿ 500 ಜನರಿಗೆ ಆಸನ ವ್ಯವಸ್ಥೆಯುಳ್ಳ ಸಭಾಂಗಣದ ಕೊರತೆ ಇದೆ. ಈ ನಿಟ್ಟಿನಲ್ಲಿ ಕರ್ನಾಟಕ ಸಂಘದ ವತಿಯಿಂದ ಸುಸಜ್ಜಿತ ರಂಗಮಂದಿರ ಕಟ್ಟುತ್ತಿದ್ದೇವೆ. ಬೊಮ್ಮಾಯಿ ಅವರು ಸಂಸದರ ನಿಧಿಯಿಂದ ಅನುದಾನ ನೀಡಬೇಕೆಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಕೆ.ಆರ್.ಎಸ್ ಅಣೆಕಟ್ಟೆಯ ಹಳೆಯ ಗೇಟುಗಳನ್ನು ಬೊಮ್ಮಾಯಿ ಅವರು ಬದಲಿಸದಿದ್ದರೆ, ತುಂಗಭದ್ರಾ ಅಣೆಕಟ್ಟೆಯ ಗೇಟು ಕಿತ್ತುಹೋದಂತೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದವು. ಮೈಷುಗರ್ ಕಾರ್ಖಾನೆ ಉಳಿವಿಗೆ ಬೊಮ್ಮಾಯಿ 50 ಕೋಟಿ ರೂ. ಕೊಟ್ಟಿದ್ದಾರೆ. ಜಿಲ್ಲೆಯ ನೀರಾವರಿ ಮತ್ತು ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಜನದನಿ ಸಾಂಸ್ಕೃತಿಕ ಟ್ರಸ್ಟ್‌ನ ಕೆ.ಜಯರಾಂ, ಸಿ.ಎಸ್.ರಾಮಕೃಷ್ಣ, ಎಚ್.ಡಿ.ಸೋಮಶೇಖರ್, ಇಂಡುವಾಳು ಹೊನ್ನಯ್ಯ ಅವರ ಪುತ್ರ ಎಚ್.ಸಿದ್ದಪ್ಪ, ಡಾ.ಆದರ್ಶ್ ಇತರರಿದ್ದರು.

ಇದೇ ವೇಳೆ ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿಯನ್ನು ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ ಅವರಿಗೆ, ದೇವಮ್ಮ ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿಯನ್ನು ಮೈಸೂರು ವಿವಿ ಕುಲಸಚಿವೆ ವಿ.ಆರ್.ಶೈಲಜಾ ಅವರಿಗೆ ಬಸವರಾಜ ಬೊಮ್ಮಾಯಿ ಅವರು ಪ್ರದಾನ ಮಾಡಿದರು. ಇಂಡುವಾಳು ಸರ್ಕಾರಿ ಪ್ರೌಢಶಾಲೆಯ ದೀಪಿಕಾ, ಚರಣ್‌ಗೆ ಶಾರದಮ್ಮ ವಿದ್ಯಾರ್ಥಿ ಪುರಸ್ಕಾರ, ವಿದ್ಯಾಗಣಪತಿ ಪ್ರೌಢಶಾಲೆಯ ಸ್ನೇಹಾ ಕೊತ್ತತ್ತಿ ಮತ್ತು ಮಾದೇಶ ಅವರಿಗೆ ಕೆಂಪಯ್ಯ ವಿದ್ಯಾರ್ಥಿ ಪುರಸ್ಕಾರ ನೀಡಲಾಯಿತು.