ಜಿಲ್ಲೆ

ಸಾಧಕರನ್ನು ಗುರುತಿಸುವ ಕೆಲಸ ಮುಖ್ಯ: ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಸಾಧನೆ ಮಾಡಿದವರನ್ನು ಗುರುತಿಸುವುದು ನಮ್ಮ ಕರ್ತವ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕೀರ್ತಿಶೇಷ ಸತ್ಯಭಾಮದೇವಿ ಬಿನ್ ಸಿದ್ದಮರಿಯಪ್ಪ ಸಮಾಜ ಸೇವಾ ಪ್ರತಿಷ್ಠಾನ, ಅನನ್ಯ ಹಾರ್ಟ್ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸತ್ಯಭಾಮ ಸಮಾಜಸೇವಾ ಮತ್ತು ಅನನ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬದುಕಿನಲ್ಲಿ ಉತ್ತಮ ಕೆಲಸ ಮಾಡುವಾಗ ಹಾಗೂ ಆಯಸ್ಸು ಪೂರ್ತಿಯಾಗಿ ಇಲ್ಲವೇ ಆಯಸ್ಸಿನ ಮಧ್ಯಭಾಗದಲ್ಲಿ ನಿಧನ ಹೊಂದಿದವರ ಹೆಸರಿನಲ್ಲಿ ಪ್ರಶಸ್ತಿ ಕೊಡುವ ಪರಿಪಾಠ ಬೆಳೆದು ಬಂದಿದೆ ಎಂದರು.

ಪ್ರಶಸ್ತಿ ಪಡೆದವರಿಗೆ ಅದರಿಂದ ಏನು ಹೆಚ್ಚಿನ ಪ್ರಯೋಜನವಾಗದಿರಬಹುದು. ಆದರೆ ಅಂತಹವರನ್ನು ಗುರುತಿಸುವುದು ನಮ್ಮ ಕರ್ತವ್ಯ. ಇತಿಹಾಸ ಗಮನಿಸುವ ಮುಂದಿನ ಪೀಳಿಗೆಗೆ ಇಂತಹ ಕೆಲಸಗಳು ಮಾರ್ಗದರ್ಶಕವಾಗುತ್ತದೆ. ಮಂಡ್ಯದ ಇತಿಹಾಸ ತಿಳಿಯುವಾಗ ಹಿಂದಿನ ಹಿರಿಯರು ಏನು ಮಾಡಿದ್ದಾರೆಂದು ನೋಡಬೇಕಾಗುತ್ತದೆ. ಆದ್ದರಿಂದ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ ಎಂದರು.

ಕೀರ್ತಿಶೇಷ ಸತ್ಯಭಾಮ ಅವರನ್ನು ಕುರಿತು ಮಾತನಾಡಿದ ಮಿಮ್ಸ್ ರೋಗ ಲಕ್ಷಣಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸಿದ್ದೇಗೌಡ, ಕ್ಯಾನ್ಸರ್ ಎಂಬ ಮಾರಕ ಕಾಯಿಲೆ ಆರಂಭದಲ್ಲಿ ಗೊತ್ತಾಗುವುದಿಲ್ಲ. ಏಕೆಂದರೆ ಅದು ಯಾವ ನೋವನ್ನೂ ಕೊಡುವುದಿಲ್ಲ. ಇದೊಂದು ಮೌನ ಕೊಲೆಗಾರನ ರೀತಿ ಕೆಲಸ ಮಾಡುತ್ತದೆ. ನಾಲ್ಕನೇ ಹಂತ ತಲುಪಿದಾಗ ಇದು ತಿಳಿಯುತ್ತದೆ. ಇದನ್ನು ಶಸ್ತ್ರಚಿಕಿತ್ಸೆ, ಔಷಧ ಮತ್ತು ವಿಕಿರಣ ಚಿಕಿತ್ಸೆಯಿಂದ ನಿಯಂತ್ರಣಕ್ಕೆ ತರಬಹುದು. ಯಾವುದೇ ಚಿಕಿತ್ಸೆಗಿಂತ ಕಾಯಿಲೆಗಳನ್ನು ಮನೋಸ್ಥೈರ್ಯವನ್ನು ಕಾಪಾಡಿಕೊಂಡು ಮೆಟ್ಟಿ ನಿಲ್ಲಬಹುದು. ಸತ್ಯಭಾಮ ಅವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರೂ ದೃಢ ಮನಸ್ಸಿನಿಂದ ಬದುಕಿ ಇತರರಿಗೆ ಮಾದರಿಯಾಗಿ ನಿಲ್ಲುತ್ತಾರೆ ಎಂದು ತಿಳಿಸಿದರು.

ಪ್ರಶಸ್ತಿ ಪುರಸ್ಕೃತರ ಬಗ್ಗೆ ನಿವೃತ್ತ ಪ್ರಾಂಶುಪಾಲ ಮ.ರಾಮಕೃಷ್ಣ ಮಾತನಾಡಿದರು. ಕೊಮ್ಮೇರಹಳ್ಳಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ, ಸೇವಾ ಪ್ರತಿಷ್ಠಾನದ ಬಿ.ಎಸ್.ಅನುಪಮಾ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಎ.ಸಿ.ರಮೇಶ್, ಕಿರಿಯ ಇಂಜಿನಿಯರ್ ಜಿ.ಎನ್.ಕೆಂಪರಾಜು, ಯುವ ಪ್ರಶಸ್ತಿ ಪುರಸ್ಕೃತರಾದ ಕಾರಸವಾಡಿ ಮಹದೇವು, ಮಂಗಲ ಎಂ ಯೋಗೀಶ್, ಅರುಣಕುಮಾರಿ ಇತರರಿದ್ದರು.

ಇದೇ ವೇಳೆ ನಿವೃತ್ತ ಪಶುವೈದ್ಯಾಧಿಕಾರಿ ಡಾ.ಕೆ.ಎಸ್.ಜಯರಾಂ ಹಾಗೂ ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶಗೌಡ ಅವರಿಗೆ ಸತ್ಯಭಾಮ ಸಮಾಜ ಸೇವಾ ಪ್ರಶಸ್ತಿ ಹಾಗೂ ಬಾಲಕೃಷ್ಣ ತಂತ್ರಿ(ಯೋಗ), ಕನ್ನಿಕಾ(ಶಿಕ್ಷಣ), ಕೋಮಲಾ ಆನಂದ್(ರಂಗಭೂಮಿ), ಆಶಾಲತಾ ಪುಟ್ಟೇಗೌಡ(ಮಹಿಳಾ ಅಭಿವೃದ್ಧಿ), ಷಣ್ಮುಖಯ್ಯ ತೋಟಾದ(ಸಾಹಿತ್ಯ), ಚ.ಮ.ಉಮೇಶ್‌ಬಾಬು(ಸಮಾಜಸೇವೆ), ಡಾ.ಮನೋಹರ್(ವೈದ್ಯಕೀಯ), ವೈರಮುಡಿ ಹನಿಯಂಬಾಡಿ(ಕಲಾವಿದ), ತಿಮ್ಮರಾಜು(ಆರೋಗ್ಯ), ಸುಜಾತಾ ರಮೇಶ್(ಮಹಿಳೆ), ಶ್ರೀನಿವಾಸ್(ಗಾಯನ) ಅವರಿಗೆ ಅನನ್ಯ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.