ಜಿಲ್ಲೆ

ಧಾರವಾಡ ಜಿಲ್ಲೆಗೆ ಪ್ರಶಸ್ತಿ ಪ್ರಕಟ

ವಿಜಯವಾಣಿ ಸುದ್ದಿಜಾಲ ಧಾರವಾಡ

ಅಂತರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನ ನಿಮಿತ್ತ ಪ್ರಜಾ ಪ್ರಭುತ್ವ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರ ಸೆಪ್ಟಂಬರ್​ನಲ್ಲಿ ಬೀದರ್​ದಿಂದ ಚಾಮರಾಜನಗರ ಜಿಲ್ಲೆಯವರೆಗೆ ಮಾನವ ಸರಪಳಿ ನಿರ್ಮಾಣ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಧಾರವಾಡ ಜಿಲ್ಲೆಯಿಂದ ಅತೀ ಹೆಚ್ಚು ಜನರು ಆನ್​ಲೈನ್​ ಮೂಲಕ ನೋಂದಣಿ ಮಾಡಿಸಿದ್ದರಿಂದ ಜಿಲ್ಲೆಗೆ ರಾಜ್ಯ ಸರ್ಕಾರವು ಪ್ರಥಮ ಸ್ಥಾನದ ಪ್ರಶಸ್ತಿ ಪ್ರಕಟಿಸಿದೆ.

ಈ ಕುರಿತು ಅಭಿನಂದನಾ ಪತ್ರ ನೀಡಿರುವ ಸರ್ಕಾರ, ಬೀದರ್​ದಿಂದ ಚಾಮರಾಜನಗರ ಜಿಲ್ಲೆಯವರೆಗೆ ಮಾನವ ಸರಪಳಿ ನಿರ್ಮಿಸಿ ಒಂದು ವಿಶಿಷ್ಟ ದಾಖಲೆ ನಿರ್ಮಿಸಲಾಗಿದೆ. ಇದು ವರ್ಡ್​ ಬುಕ್​ ಆಫ್ ರೆಕಾರ್ಡ್ಸ್​ ಸೇರ್ಪಡೆಗೊಂಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲೆಗಳನ್ನು ಮಾನವ ಸರಪಳಿ ನಾವಿಣ್ಯತೆ, ಅತ್ಯಂತ ಉದ್ದದ ಮಾನವ ಸರಪಳಿ, ಅತಿ ಹೆಚ್ಚು ಗಿಡಗಳನ್ನು ನೆಡುವುದು, ಅತಿ ಹೆಚ್ಚು ಸ್ವಯಂ ಸೇವಾ ಸಂಗಳ, ಖಾಸಗಿ ಕಂಪನಿಗಳ ಭಾಗವಹಿಸುವಿಕೆ ಮತ್ತು ಅತಿ ಹೆಚ್ಚು ಆನ್​ಲೈನ್​ ನೋಂದಣಿ ಮಾಡಿರುವುದು ಸೇರಿ 6 ವಿಭಾಗಗಳಲ್ಲಿ ತಲಾ 3 ಪ್ರಶಸ್ತಿಗಳನ್ನು ನೀಡಲು ಸರ್ಕಾರ ತೀರ್ಮಾನಿಸಿದೆ.

ಈ ಪೈಕಿ ಧಾರವಾಡ ಜಿಲ್ಲೆ ಅತೀ ಹೆಚ್ಚು ಆನ್​ಲೈನ್​ ನೋಂದಣಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದೆ. ನ. 26ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಡಾ. ಬಿ.ಆರ್​. ಅಂಬೇಡ್ಕರ್​ ಭವನದಲ್ಲಿ ಏರ್ಪಡಿಸಿರುವ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಮುಖ್ಯಮಂತ್ರಿಗಳು ಪ್ರಶಸ್ತಿ ವಿತರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.