ಮಡಿಕೇರಿ:
ಬೆಂಗಳೂರಿನಲ್ಲಿ ನಡೆದ ಕಾಸ್ಕಾರ್ಡ್ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯಲ್ಲಿ ಮಡಿಕೇರಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ರಾಜ್ಯಮಟ್ಟದ ಎರಡು ಅತ್ಯುತ್ತಮ ಪ್ರಶಸ್ತಿ ಪಡೆದುಕೊಂಡಿರುವುದಾಗಿ ಬ್ಯಾಂಕ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ತಿಳಿಸಿದ್ದಾರೆ.
ಶೇ.98.60ಯಷ್ಟು ಸಾಲ ವಸೂಲಾತಿ ನಡೆದಿರುವುದರಿಂದ ಶೇಕಡವಾರು ಅತೀ ಹೆಚ್ಚು ವಸೂಲಾತಿ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ 2 ಪ್ರಶಸ್ತಿಗಳು ಬಂದಿದೆ. ಸೆ.25ರಂದು ಬೆಂಗಳೂರಿನಲ್ಲಿ ನಡೆದ ಕಾಸ್ಕಾರ್ಡ್ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯಲ್ಲಿ ರಾಜ್ಯದ 183 ಪಿಕಾರ್ಡ್ ಬ್ಯಾಂಕ್‌ಗಳ ಪೈಕಿ ಮಡಿಕೇರಿ ಪಿಕಾರ್ಡ್ ಬ್ಯಾಂಕ್‌ಗೆ ಈ ಎರಡು ಪ್ರಶಸ್ತಿಗಳು ಲಭಿಸಿದೆ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2017-18, 2018-19, 2023-24ನೇ ಸಾಲಿನಲ್ಲಿ 183 ಪಿಕಾರ್ಡ್ ಬ್ಯಾಂಕ್‌ಗಳ ಪೈಕಿ ಅತ್ಯುತ್ತಮ ಬ್ಯಾಂಕ್ ಎಂದು ನಾಲ್ಕು ಬಾರಿ, 2023-24, 2024-25ರಲ್ಲಿ ವಸೂಲಾತಿಯಲ್ಲಿ ಪ್ರಶಸ್ತಿ ಪಡೆದುಕೊಳ್ಳಲಾಗಿದೆ. ಕಳೆದ 19 ವರ್ಷಗಳಿಂದ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಬರಲಾಗಿದೆ. ಈ ಗೌರವ ಬ್ಯಾಂಕಿನ ಸದಸ್ಯರಿಗೆ ಸಲ್ಲುತ್ತದೆ.
25 ಸದಸ್ಯರೊಂದಿಗೆ 1957ರಲ್ಲಿ ಪ್ರಾರಂಭಗೊAಡ ಬ್ಯಾಂಕಿನಲ್ಲಿ ಈಗ 2772 ಸದಸ್ಯರು ಇದ್ದಾರೆ. ಖಾಲಿ ಜಮ್ಮಾ ಬಾಣೆ ಜಮೀನಿಗೆ ಸಾಲ ಸೌಲಭ್ಯ ನೀಡಿದ ಪ್ರಥಮ ಬ್ಯಾಂಕ್ ಇದಾಗಿದೆ. ಇದರಿಂದಾಗಿ ತಾಲೂಕಿನಲ್ಲಿ ಸಾವಿರಾರು ಎಕರೆಯಲ್ಲಿ ಕಾಫಿ, ಕರಿಮೆಣಸು, ಅಡಿಕೆ, ತೆಂಗು ತೋಟ ಮಾಡಲು ರೈತರಿಗೆ ಸಾಧ್ಯವಾಯಿತು.
ಸಾಲದ ಚಾಲ್ತಿ ಕಂತನ್ನು ಮರುಪಾವತಿ ಮಾಡುವ ಸಾಲ ಪಡೆದ ಸದಸ್ಯರಿಗೆ ಲಾಭದಲ್ಲಿ ಕಾದಿರಿಸಿದ ಮೊಬಲಗಿನಿಂದ 5 ಸಾವಿರ ರೂ. ತನಕ ಬಡ್ಡಿ ರಿಯಾಯಿತಿಯನ್ನು ರಾಜ್ಯದಲ್ಲೇ ಪ್ರಥಮ ಬಾರಿಗೆ ಕೊಡಲಾಗುತ್ತಿದೆ. ಸಾಲ ಪಡೆದ ರೈತರ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರತಿ ವರ್ಷ ಸನ್ಮಾನ ಮಾಡಲಾಗುತ್ತಿದೆ.
2024-25ನೇ ಸಾಲಿನಲ್ಲಿ ಬ್ಯಾಂಕ್ 2,00,83,928 ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 8ರಷ್ಟು ಡಿವಿಡೆಂಟ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಉಪಾಧ್ಯಕ್ಷ ನಾಪಂಡ ರ‍್ಯಾಲಿ ಮಾದಯ್ಯ, ನಿರ್ದೇಶಕರಾದ ಹೆಚ್.ಆರ್. ವಾಸಪ್ಪ, ಅಲ್ಲಾರಂಡ ಬೀನಾ ಬೊಳ್ಳಮ್ಮ, ಸಿಇಒ ಕೆ.ಎನ್. ಸುಪರ್ಣಾ,
ವ್ಯವಸ್ಥಾಪಕ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ಇದ್ದರು.