ಬೆಳಗಾವಿ: ಕೊಲ್ಲಾಪುರದ ಕನೇರಿಮಠದ ಸಿದ್ಧಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮಿದುಳು ವಿಭಾಗ(ಸಂಸ್ಕಾರ)ದಲ್ಲಿ ರೋಗಿಯ ಮಿದುಳಿನಲ್ಲಿದ್ದ ಗಂಟನ್ನು ಅಪರೂಪದ ‘ಅವೇಕ್ ಕ್ರೆನಿಯೋಟಮಿ’ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆಯಲಾಗಿದೆ ಎಂದು ಆಸ್ಪತ್ರೆಯ ನರರೋಗ ಶಸ್ತ್ರಚಿಕಿತ್ಸಕ ಡಾ.ಶಿವಶಂಕರ ಮರಜಕ್ಕೆ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವೇಕ್ ಕ್ರೆನಿಯೋಟಮಿ ಶಸ್ತ್ರಚಿಕಿತ್ಸೆ ವೇಳೆ ರೋಗಿಗೆ ಪೂರ್ತಿಯಾಗಿ ಅರವಳಿಕೆ ನೀಡದೆ, ಮಿದುಳಿನ ಪ್ರಮುಖ ಭಾಗಕ್ಕೆ ಮಾತ್ರ ಅರಿವಳಿಕೆ ನೀಡಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಇಡೀ ದೇಹಕ್ಕೆ ಅರಿವಳಿಕೆ ನೀಡಿದರೆ ಅಂಗಾಗಳು ವೈಫಲ್ಯವಾಗುವ ಸಾಧ್ಯತೆ ಹೆಚ್ಚಿರುತ್ತವೆ. ಇಂತಹ ಶಸ್ತ್ರಚಿಕಿತ್ಸೆ ವೇಳೆ ರೋಗಿಯನ್ನು ಮಾತನಾಡಿಸಿಕೊಂಡು ಆರಾಮದಾಯಕ ಸ್ಥಿತಿಯಲ್ಲಿ ಇಡಬೇಕಾಗುತ್ತದೆ. ಪ್ರಸ್ತುತ ರೋಗಿಯ ಸಂಗೀತಾಸಕ್ತಿಯಂತೆ ಕೊಳಲು ನುಡಿಸುವಾಗ ಶಸ್ತ್ರಚಿಕಿತ್ಸೆ ನಡೆಸಿರುವುದು ವಿಶೇಷ. ಸಿದ್ಧಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಕಳೆದ 10 ವರ್ಷದಲ್ಲಿ 102 ರೋಗಿಗಳಿಗೆ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದರು.
ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಅನುಭವಿ ಶಸ್ತ್ರಚಿಕಿತ್ಸಕರು, ತಜ್ಞ ವೈದ್ಯರ ತಂಡದೊಂದಿಗೆ ಟ್ರಾಕ್ಟೋಗ್ರಫಿ ತಂತ್ರಜ್ಞಾನ, ನ್ಯೂರೋ ನ್ಯಾವಿಗೇಷನ್ ಮಷಿನ್, ನ್ಯೂರೋ ಮಾನಿಟರಿಂಗ್ ಸಿಸ್ಟಂ ಮೂಲಕ ಸಿದ್ಧಗಿರಿ ಆಸ್ಪತ್ರೆಯಲ್ಲಿ ಅವೇಕ್ ಕ್ರೆನಿಯೋಟಮಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂದರು.
ಸಿದ್ಧಗಿರಿ ಆಸ್ಪತ್ರೆಯ ನ್ಯೂರೋ ಅರಿವಳಿಕೆ ತಜ್ಞ ಡಾ.ಪ್ರಕಾಶ ಭರಮಗೌಡರ, ವಿವೇಕ ಸಿದ್ಧ, ರಾಜೇಂದ್ರ ಶಿಂಧೆ, ಕುಮಾರ ಚವ್ಹಾಣ, ರಿತುರಾಜ್ ಭೋಸ್ಲೆ, ದಯಾನಂದ ಡೋಂಗ್ರೆ ಸುದ್ದಿಗೋಷ್ಠಿಯಲ್ಲಿ ಇದ್ದರು.