filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0; 
ಜಿಲ್ಲೆ

ಎವಿಎಸ್ ಶ್ರೀಧರ್ ಹೊಳೆನರಸೀಪುರ ಪುರಸಭೆ ಅಧ್ಯಕ್ಷ

ಹೊಳೆನರಸೀಪುರ: ಪಟ್ಟಣದ ಪುರಸಭೆಗೆ ಸೋಮವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ನೂತನ ಅಧ್ಯಕ್ಷರಾಗಿ ಎವಿಎಸ್ ಶ್ರೀಧರ್, ಉಪಾಧ್ಯಕ್ಷರಾಗಿ ಪೂಜೆಕೊಪ್ಪಲು ಸಾವಿತ್ರಮ್ಮ ಅವಿರೋಧವಾಗಿ ಆಯ್ಕೆಯಾದರು.


ಐದು ವರ್ಷದ ಅವಧಿಯಲ್ಲಿ ಎರಡು ವರ್ಷ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಆಡಳಿತ ನಡೆಸಿದ್ದು, ಎರಡನೇ ಬಾರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ವೇಳೆ ಮೀಸಲಾತಿಯಲ್ಲಿ ತೊಡಕಾದ ಪರಿಣಾಮ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. 15 ತಿಂಗಳ ಬಳಿಕ ನ್ಯಾಯಾಲಯದ ಆದೇಶ ಹೊರ ಬೀಳುತ್ತಿದ್ದಂತೆ ಪಟ್ಟಣದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗರಿಗೆದರಿತ್ತು. ಉಳಿದ 15 ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬ ಮಹಿಳೆ ಸ್ಥಾನಕ್ಕೆ ಚುನಾವಣೆ ನಡೆಸಲು ಆದೇಶ ಹೊರಡಿಸಲಾಗಿತ್ತು.


ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರ ಸೂಚನೆಯಂತೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗದಿಂದ 10ನೇ ವಾರ್ಡಿನ ಸದಸ್ಯ ಎವಿಎಸ್ ಶ್ರೀಧರ್ ಮತ್ತು ಉಪಾಧ್ಯಕ್ಷೆ ಸ್ಥಾನಕ್ಕೆ 23ನೇ ವಾರ್ಡಿನ ಸದಸ್ಯೆ ಸಾವಿತ್ರಮ್ಮ ಹಿಂದುಳಿದ ವರ್ಗ (ಬ) ಮಹಿಳೆಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಪುರಸಭೆಯಲ್ಲಿ ಒಟ್ಟು 23 ಸದಸ್ಯರಿದ್ದು ಜೆಡಿಎಸ್ ಪಕ್ಷದ 21 ಸದಸ್ಯರ ಪೈಕಿ ಒಬ್ಬ ಮಹಿಳಾ ಸದಸ್ಯೆ ಮತ್ತು ಕಾಂಗ್ರೆಸ್ ಪಕ್ಷದ ಒಬ್ಬ ಸದಸ್ಯ ಗೈರಾಗಿದ್ದರು. ಇತರರು ಯಾರೂ ಅರ್ಜಿ ಸಲ್ಲಿಸದ ಕಾರಣ ಎವಿಎಸ್ ಶ್ರೀಧರ್ ಅವರನ್ನು ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಸಾವಿತ್ರಮ್ಮ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.


ಕೆಲ ಸದಸ್ಯರು ಅಧ್ಯಕ್ಷ ಸ್ಥಾನ ವಂಚಿತವಾದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಹೊರ ನಡೆದಿದ್ದು ಕಂಡುಬಂತು. ಅಷ್ಟೇ ಅಲ್ಲದೆ ಉಪಾಧ್ಯಕ್ಷರಾಗಿದ್ದ ತ್ರಿಲೋಚನಾ ಅವರು ಅಧ್ಯಕ್ಷರ ಆಯ್ಕೆ ವೇಳೆ ಭಾಗಿಯಾಗಲಿಲ್ಲ ಹಾಗೂ ನಡಾವಳಿ ಪುಸ್ತಕಕ್ಕೂ ಸಹಿ ಹಾಕಲಿಲ್ಲ.


ಪುರಸಭೆ ನೂತನ ಅಧ್ಯಕ್ಷ ಎವಿಎಸ್ ಶ್ರೀಧರ್ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುತ್ತೇನೆ. ಯಾವುದೇ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ವಾರ್ಡಿನ ಸಮಸ್ಯೆ ತಿಳಿಸಿದಲ್ಲಿ ತುರ್ತು ಕ್ರಮವಹಿಸಿ ಬಗೆಹರಿಸಲು ಪ್ರಯತ್ನಿಸುತ್ತೇನೆ. ಕುಡಿಯುವ ನೀರು, ಯುಜಿಡಿ ವ್ಯವಸ್ಥೆ ಹಾಗೂ ಸ್ವಚ್ಛತೆಗೆ ಹೆಚ್ಚು ಆದ್ಯತೆ ಕೊಡುವುದಾಗಿ ತಿಳಿಸಿದರು.


ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಪುರಸಭೆಯಲ್ಲಿ ಯಾವುದೇ ಸಮಸ್ಯೆ ಉಲ್ಬಣವಾಗದಂತೆ ಒಗ್ಗಟ್ಟಾಗಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕು. ಎವಿಎಸ್ ಶ್ರೀಧರ್ ಅವರು ಪಕ್ಷಕ್ಕಾಗಿ ದುಡಿದಿದ್ದು ಹಾಗೂ ಹಿರಿಯ ಸದಸ್ಯನಾಗಿದ್ದು ಎಲ್ಲರ ಒಪ್ಪಿಗೆ ಮೇರೆಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಪಟ್ಟಣದ ಅಭಿವೃದ್ಧಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದರು.


ಚುನಾವಣಾಧಿಕಾರಿಯಾಗಿ ಕೆ.ಕೆ.ಕೃಷ್ಣಮೂರ್ತಿ ಕಾರ್ಯನಿರ್ವಹಿಸಿದರು. ಎಲ್ಲ ಸದಸ್ಯರು, ಪಕ್ಷದ ಮುಖಂಡರು, ಪುರಸಭೆ ಸಿಬ್ಬಂದಿ ಹಾಜರಿದ್ದರು.