ಆಂಡಿಪಾಳ್ಯ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವಂತೆ ದಸಂಸ ಮೈಸೂರು ವಿಭಾಗೀಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರಲ್ಲಿ ಮನವಿ ಸಲ್ಲಿಸಿದರು. ಆಲೂರು ನಾಗೇಂದ್ರ, ಮುತ್ತು, ಮುರುಗೇಶ್ ಇತರರಿದ್ದರು. 
ಜಿಲ್ಲೆ

ಆಂಡಿಪಾಳ್ಯದಲ್ಲಿ ಕಾಡು ಪ್ರಾಣಿಗಳ ಹಾವಳಿ ತಪ್ಪಲಿ

ವಸಂತಕುಮಾರ್ ಬಿ

ಹನೂರು: ತಾಲೂಕಿನ ಆಂಡಿಪಾಳ್ಯ ಭಾಗದ ಕಂದಕದಲ್ಲಿ ಬೆಳೆದಿರುವ ಗಿಡಿಗಂಟಿಗಳನ್ನು ತೆರೆವುಗೊಳಿಸುವುದರ ಜತೆಗೆ ರೈಲ್ವೆ ಕಂಬಿಗಳನ್ನು ಅಳವಡಿಸಿ ಕಾಡು ಪ್ರಾಣಿಗಳ ಹಾವಳಿಯನ್ನು ತಪ್ಪಿಸಬೇಕು ಎಂದು ಶನಿವಾರ ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗೀಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರಲ್ಲಿ ಮನವಿ ಸಲ್ಲಿಸಿದರು.

ಆಂಡಿಪಾಳ್ಯ ಭಾಗದಲ್ಲಿ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ರೈತರು ಕೃಷಿ ಮಾಡುತ್ತಿದ್ದು, ಇವರೆಲ್ಲರೂ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸೇರಿದ್ದಾರೆ. ಇಲ್ಲಿ ಹೆಚ್ಚಾಗಿ ಆಲೂಗಡ್ಡೆ, ಈರುಳ್ಳಿ, ಎಲೆಕೋಸು, ಬಾಳೆ, ಮುಸುಕಿನ ಜೋಳ ಹಾಗೂ ಇನ್ನಿತರೆ ಬೆಳೆಯಲಾಗುತ್ತದೆ. ಆದರೆ ರಾತ್ರಿ ವೇಳೆ ಕಾಡು ಪ್ರಾಣಿಗಳು ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿವೆ. ಇದರಿಂದ ರೈತರು ನಷ್ಟವನ್ನು ಅನುಭವಿಸುವಂತಾಗಿದೆ. ಈ ಬಗ್ಗೆ ಲೊಕ್ಕನಹಳ್ಳಿ ವಲಯ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಕಾಡು ಪ್ರಾಣಿಗಳು ಜಮೀನುಗಳಿಗೆ ಲಗ್ಗೆ ಇಡದಂತೆ ಕ್ರಮಕೈಗೊಳ್ಳಬೇಕು. ಜತೆಗೆ ರೈತರಿಗೆ ಫಿನಿಕ್ಸ್ ಬ್ಯಾಟರಿಯನ್ನು ಉಚಿತವಾಗಿ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಗ್ರಾಮಸ್ಥರ ಜತೆಗೂಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಿದ್ದರಾಜು ಅವರು ಮನವಿಯಲ್ಲಿ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಆಲೂರು ನಾಗೇಂದ್ರ, ತಾಲೂಕು ಅಧ್ಯಕ್ಷ ಮುರುಗೇಶ್, ಮುತ್ತು ಮತ್ತಿತರರಿದ್ದರು.