ಜಿಲ್ಲೆ

ಜನರು ಕಚೇರಿಗೆ ಅಲೆಯುವುದನ್ನು ತಪ್ಪಿಸಿ

ಲಲಾಟಾಕ್ಷ ಎಸ್

ಪಾಂಡವಪುರ: ಸರ್ಕಾರದ ಪ್ರತಿಯೊಂದು ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಮೂಲಕ ಜನರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಬೇಕು. ಇದಕ್ಕಾಗಿ ಅಧಿಕಾರಿಗಳು ಎಲ್ಲ ರೀತಿಯ ಸಹಕಾರ ನೀಡಬೇಕು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಗ್ಗೂಡಿದರೆ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬಹುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.


ತಾಲೂಕಿನ ಕೆನ್ನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುವಾರ ಆಯೋಜಿಸಿದ್ದ ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ, ಇದು ಸೇವೆಯಲ್ಲ ನಮ್ಮ ಕರ್ತವ್ಯ ಎಂಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ಅಧೀನದಲ್ಲಿರುವ ಎಲ್ಲ ಇಲಾಖೆಗಳಲ್ಲಿ ಯಾವ್ಯಾವ ಸೇವೆಗಳು ಲಭ್ಯವಿದೆ ಎಂಬುದರ ಬಗ್ಗೆ ಅಧಿಕಾರಿಗಳು ಜನರಿಗೆ ಮಾಹಿತಿ ನೀಡಬೇಕು. ಸೇವೆಯಿಂದ ವಂಚಿತರಾಗಿರುವ ಜನರಿಂದ ಅಗತ್ಯ ದಾಖಲೆ ಪಡೆದು ತಕ್ಷಣ ಆ ಕೆಲಸ ಮಾಡಿ ಮುಗಿಸಬೇಕು. ಕಂದಾಯ ಮತ್ತು ತಾಲೂಕು ಪಂಚಾಯಿತಿಗೆ ಸಂಬಂಧಿಸಿದಂತೆ ಜನರಿಗೆ ಹೆಚ್ಚು ಕೆಲಸ ಆಗಬೇಕಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲು ಅಧಿಕಾರಿಗಳು ಒಂದು ಗುರಿ ಇಟ್ಟುಕೊಂಡು ಕೆಲಸ ಮಾಡಬೇಕು. ಉನ್ನತ ಅಥವಾ ಜಿಲ್ಲಾ ಮಟ್ಟದ ಅಧಿಕಾರಿಗಳ ಮೂಲಕ ಆಗಬೇಕಾದ ಕೆಲಸಗಳು ಹಾಗೂ ಏನಾದರೂ ಗೊಂದಲಗಳಿದ್ದರೆ ನನ್ನನ್ನು ಸಂಪರ್ಕಿಸುವಂತೆ ತಿಳಿಸಿದರು.


ಜನ ತಮ್ಮ ಕೆಲಸ ಕಾರ್ಯಗಳಿಗಾಗಿ ಅಗತ್ಯ ದಾಖಲೆ ಒದಗಿಸಿದ ಬಳಿಕ ಯಾರನ್ನೂ ಕಚೇರಿಗೆ ಅಲೆಸುವಂತಿಲ್ಲ. ಒಂದು ಕೆಲಸಕ್ಕೆ ಮತ್ತೊಂದು ಇಲಾಖೆ ಸಹಕಾರ ಬೇಕಾದರೆ ಆ ಇಲಾಖೆಯೊಂದಿಗೆ ಸಂಪರ್ಕ ಸಾಧಿಸಿ ಜನರ ಕೆಲಸ ಪೂರ್ಣಗೊಳಿಸಬೇಕು. ಎಲ್ಲ ಕೆಲಸ ಕಾರ್ಯಗಳು ಸಿಂಗಲ್ ವಿಂಡೋ ಮಾದರಿಯಲ್ಲಿ ನಡೆಯಬೇಕು. ಸರ್ವೇ, ಜಮೀನು ಒತ್ತುವರಿ, ಖರಾಬು, ರಸ್ತೆ ತೆರವು, ಜಾಡು ಇತರೆ ಯಾವುದೇ ಸಮಸ್ಯೆಗಳಿದ್ದರೂ ಗ್ರಾಮದ ಹಿರಿಯರ ಸಹಕಾರದೊಂದಿಗೆ ಪರಿಹರಿಸಲು ಪ್ರಯತ್ನಿಸಬೇಕು. ಸಾಧ್ಯವೇ ಇಲ್ಲ ಎಂದಾಗ ಕೋರ್ಟ್‌ಗೆ ಹೋಗಲಿ. ನೂರಕ್ಕೆ ನೂರರಷ್ಟು ಯಶಸ್ಸು ಸಾಧಿಸದಿದ್ದರೂ ಸಾಧ್ಯವಾದಷ್ಟು ಪ್ರಯತ್ನಿಸೋಣ. ಕೆನ್ನಾಳು ಗ್ರಾಪಂ ವ್ಯಾಪ್ತಿಯಲ್ಲಿ ಪ್ರಾರಂಭವಾಗುತ್ತಿರುವ ಕಾರ್ಯಕ್ರಮ ಮೇಲುಕೋಟೆ ಕ್ಷೇತ್ರದ ಎಲ್ಲ ಗ್ರಾಪಂಗಳಲ್ಲೂ ನಡೆಯಲಿದೆ. 15 ದಿನದೊಳಗೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಯೋಚಿಸಲಾಗಿದೆ. ಇನ್ನೂ ಹೆಚ್ಚಿನ ದಿನಗಳಾದರೂ ವಿಫಲತೆ ಕಾಣದೆ ಪರಿಪೂರ್ಣತೆ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.


ಸೆಸ್ಕ್ ಇಲಾಖೆ ಅಧಿಕಾರಿಗಳು ಶಿಥಿಲಗೊಂಡಿರುವ ವಿದ್ಯುತ್ ಲೈನ್ ಬದಲಾವಣೆ, ಅಗತ್ಯವಿರುವ ಕಡೆ ವಿದ್ಯುತ್ ಪರಿವರ್ತಕ ಅಳವಡಿಕೆ, ಮನೆ ಮೇಲೆ ಹಾದು ಹೋಗಿರುವ ವಿದ್ಯುತ್ ಮಾರ್ಗ ಬದಲಾವಣೆ ಸೇರಿದಂತೆ ಇರುವ ಸಮಸ್ಯೆಗಳನ್ನು ನಿವಾರಿಸಬೇಕು. ಹೈಮಾಸ್ಟ್ ಮತ್ತು ಸೋಲಾರ್ ದೀಪಗಳ ಅಗತ್ಯವಿದ್ದು, ಸರ್ವೇ ನಡೆಸಿ ಅಗತ್ಯವಿರುವ ಕಡೆ ಅಳವಡಿಸಬೇಕು. ಅಬಕಾರಿ ಅಧಿಕಾರಿಗಳು ಗ್ರಾಮಗಳ ಪೆಟ್ಟಿ ಅಂಗಡಿಗಳಲ್ಲಿ ಮದ್ಯ ಅಕ್ರಮವಾಗಿ ಮಾರಾಟ ಮಾಡುವುದನ್ನು ತಡೆಯಬೇಕು. ಈ ಬಗ್ಗೆ ಕ್ರಮಕ್ಕೆ ಪೊಲೀಸರಿಗೂ ಸಹ ಸೂಚಿಸಲಾಗಿದೆ ಎಂದರು.


ತರಬೇತಿ, ಅರಿವು ಕಾರ್ಯಕ್ರಮ:
ಪ್ರತಿದಿನ ಸಂಜೆ 4ರಿಂದ 6ರವರೆಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ತರಬೇತಿ ಮತ್ತು ಅರಿವು ಕಾರ್ಯಕ್ರಮ ಇರುತ್ತದೆ. ಇದರಲ್ಲಿ ಸ್ವಚ್ಛತೆ, ಆರ್ಥಿಕ ನಿರ್ವಹಣೆ, ಪರಿಸರ ಸಂರಕ್ಷಣೆ, ಜಾಗತಿಕ ತಾಪಮಾನ ಸಮತೋಲನ ಕಾಪಾಡುವುದು ಹೇಗೆ? ಎಂಬಿತ್ಯಾದಿ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಒಂದೊಂದು ದಿನ ಅರಿವು ಮೂಡಿಸಲಿದ್ದಾರೆ ಎಂದು ಹೇಳಿದರು.


ಸ್ಥಳದಲ್ಲಿದ್ದ ಅಧಿಕಾರಿಗಳು:
ಕಾರ್ಯಕ್ರಮ ಯಶಸ್ವಿಗಾಗಿ ಉಪವಿಭಾಗಾಧಿಕಾರಿ, ತಹಸೀಲ್ದಾರ್, ತಾಪಂ ಇಒ, ಬಿಇಒ ಸೇರಿದಂತೆ ಅನೇಕ ಅಧಿಕಾರಿಗಳು ಸ್ಥಳದಲ್ಲಿದ್ದರು. ಕಂದಾಯ, ಪಂಚಾಯತ್ ರಾಜ್, ಪಶುಸಂಗೋಪನಾ, ತಾಲೂಕು ಪಂಚಾಯಿತಿ, ಆರೋಗ್ಯ, ಸೆಸ್ಕ್, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿದರು. ಉಪವಿಭಾಗಾಧಿಕಾರಿ ಎಂ.ಎಲ್.ನಂದೀಶ್, ತಹಸೀಲ್ದಾರ್ ಶ್ರೇಯಸ್, ಉಪ ತಹಸೀಲ್ದಾರ್ ಎಸ್.ಸಂತೋಷ್, ತಾಪಂ ಇಒ ಲೋಕೇಶ್ ಮೂರ್ತಿ, ಬಿಇಒ ಚಂದ್ರಶೇಖರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಅಶೋಕ್, ಸಹಾಯಕ ನಿರ್ದೇಶಕ ಟಿ.ಎಸ್.ಮಂಜುನಾಥ್, ತೋಟಗಾರಿಕೆ ಎಡಿ ಸೌಮ್ಯಾ, ಸೆಸ್ಕ್ ಎಇಇ ವಿ.ಪುಟ್ಟಸ್ವಾಮಿ, ರೇಷ್ಮೆ ಇಲಾಖೆ ಎಡಿ ರವಿಕುಮಾರ್, ಉಪವಿಭಾಗೀಯ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಇದ್ದರು.