ದೇವನಹಳ್ಳಿ ತಾಲೂಕಿನ ಆವತಿ ಬೆಟ್ಟದ ವಿಹಂಗಮ ನೋಟ 
ಜಿಲ್ಲೆ

ಆವತಿ ಬೆಟ್ಟ ಅಭಿವೃದ್ಧಿಗೆ ಮರುಜೀವ

ಶಿವರಾಜ.ಎಂ

ಪ್ರವಾಸ ಪ್ರಿಯರಿಗೆ ಸಿಹಿಸುದ್ದಿ

ನಾಡಪ್ರಭು ಕೆಂಪೇಗೌಡರಿಗೆ ಪ್ರವಾಸೋದ್ಯಮ ಮನ್ನಣೆ


ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ನಾಡಪ್ರಭು ಕೆಂಪೇಗೌಡರ ಮೂಲಸ್ಥಳವೆನಿಸಿರುವ ದೇವನಹಳ್ಳಿ ತಾಲೂಕಿನ ಆವತಿಯಲ್ಲಿನ ಆವತಿ ಬೆಟ್ಟದ ಅಭಿವೃದ್ಧಿಗೆ ಮರುಜೀವ ಬಂದಿದೆ.
ಕೆಂಪೇಗೌಡರ 515ನೇ ಜಯಂತಿಯ ಸುಸಂದರ್ಭದಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಈಗೊಂದು ಸಿಹಿಸುದ್ದಿ ನೀಡಿದೆ. ಅಂದಾಜು 5 ಕೋಟಿ ರೂ.ವೆಚ್ಚದಲ್ಲಿ ಆವತಿ ಬೆಟ್ಟದಲ್ಲಿ ಕೆಲವೊಂದು ಆಯ್ದ ಅಭಿವೃದ್ಧಿ ಕಾಮಗಾರಿ ನಡೆಸಲು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಪರಿಕಲ್ಪನಾ ವರದಿ (ಡಿಪಿಆರ್) ಸಿದ್ದಪಡಿಸಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ನಾಡಪ್ರಭು ಕೆಂಪೇಗೌಡರ ಕಾಲದ ಐತಿಹಾಸಿಕ ಕುರುಹು ಹೊಂದಿರುವ ಆವತಿ ಬೆಟ್ಟದಲ್ಲಿ ಕೆಲವೊಂದು ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಹಸಿರು ನಿಶಾನೆ ತೋರಿಸಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಮೂಲ ಎನಿಸಿರುವ ರಾಜಧಾನಿಯ ಗಡಿ ಹಂಚಿಕೊಂಡಿರುವ ಆವತಿ ಬೆಟ್ಟದ ಅಭಿವೃದ್ಧಿಗೆ ಅನುದಾನ ಕೋರಿ ಈ ಹಿಂದೆ ಹಲವು ಬಾರಿ ಪ್ರವಾಸೋದ್ಯಮ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಕೆಯಾಗಿತ್ತು ಎನ್ನಲಾಗಿದೆ. ಆದರೆ ಯಾವೊಂದು ಸರ್ಕಾರವೂ ಈ ಬಗ್ಗೆ ಕಾಳಜಿ ತೋರಿಸಿಲ್ಲ. ಆದ್ದರಿಂದ ಅಭಿವೃದ್ಧಿ ಪ್ರಸ್ತಾವನೆ ನೆನಗುದಿಗೆ ಬಿದ್ದಿತ್ತು. ಆದರೆ ಕಳೆದ ಮೂರು ತಿಂಗಳ ಹಿಂದೆ ಮತ್ತೊಮ್ಮೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆ 5 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ಸಿದ್ದಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಆವತಿ ಅಭಿವೃದ್ಧಿಗೆ ಮತ್ತೊಮ್ಮೆ ಮರುಜೀವ ಬಂದಂತಾಗಿದೆ. ಸರ್ಕಾರ ಈ ಬಾರಿಯಾದರೂ ಆಸಕ್ತಿ ತೋರಿಸಿದರೆ ಗ್ರಾಮಾಂತರ ಜಿಲ್ಲೆಯಲ್ಲಿನ ಐತಿಹಾಸಿಕ ಪ್ರವಾಸಿ ತಾಣ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿದೆ ಎಂಬ ಒತ್ತಾಸೆ ವ್ಯಕ್ತವಾಗಿದೆ.

ಪ್ರಮುಖ ಕಾಮಗಾರಿಗಳೇನು?
*ನಿರ್ವಚನಾ ಕೇಂದ್ರ ಇಂಟರ್‌ಪ್ರಿಯೇಷನ್ ಸೆಂಟರ್) ಹಾಗೂ ಆಂಪಿಥಿಯೇಟರ್ ನಿರ್ಮಾಣ

  • ಬೆಟ್ಟದ ಮೇಲೆ ಸುಂದರ ಉದ್ಯಾನವನ ನಿರ್ಮಾಣ
    *ಬೆಟ್ಟಕ್ಕೆ ಸಾಗಲು ಸುಸಜ್ಜತ ರಸ್ತೆ ನಿರ್ಮಾಣ
    *ಬೆಟ್ಟದ ಆರಂಭದಿಂದ ತುದಿಯವರೆಗೆ ಶುದ್ಧ ಕುಡಿವ ನೀರಿನ ವ್ಯವಸ್ಥೆ
    *ಸಾರ್ವಜನಿಕ ಶೌಚಗೃಹ ಹಾಗೂ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ಸ್ಥಳ ನಿರ್ಮಾಣ
    *ಬೆಟ್ಟದಲ್ಲಿ ಸೋಲಾರ್ ದೀಪಗಳ ಅಳವಡಿಕೆ
  • ಪ್ರವಾಸಿಗರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ
    *ಬೆಟ್ಟದ ತುದಿಯಲ್ಲಿ ಪೆರೆಗೋಲ ನಿರ್ಮಾಣ
  • * ಹೋರ್ಡಿಂಗ್ಸ್ ಮತ್ತು ಸೈನಜ್‌ಗಳ ಅಳವಡಿಕೆ

ಆವತಿಯಿಂದ ಕೆಂಪೇಗೌಡ ಜ್ಯೋತಿ:
ಜೂ.27ರಂದು ಬೆಳಗ್ಗೆ 10ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿಯ ರಾಜ್ಯ ಮಟ್ಟದ ಕಾರ್ಯಕ್ರಮ ಅಯೋಜಿಸಲಾಗಿದ್ದು, ಇದರ ಅಂಗವಾಗಿ ನಾಡಪ್ರಭು ಕೆಂಪೇಗೌಡರ ಮೂಲಸ್ಥಳವಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದ ಚನ್ನಕೇಶವ ದೇವಾಲಯದಿಂದ ಅಂದು ಬೆಳಗ್ಗೆ 7:30 ಕ್ಕೆ ಕೆಂಪೇಗೌಡ ಜ್ಯೋತಿ ಹೊರಡಲಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ತಿಳಿಸಿದ್ದಾರೆ.

ಬೆಟ್ಟದಲ್ಲಿವೆ ಕುರುಹು:
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ವಂಶಸ್ಥ ನಾಡಪ್ರಭು ರಣಭೈರೇಗೌಡರ ಕರ್ಮಭೂಮಿ ಎನಿಸಿರುವ ಆವತಿ ಬೆಟ್ಟ ಅಭಿವೃದ್ಧಿಯಿಂದ ಹಿಂದುಳಿದಿದೆ. ಕೆಂಪೇಗೌಡರ ಕಾಲದ ಐತಿಹಾಸಿಕ ಕುರುಹು ಹೊಂದಿರುವ ಸುಮಾರು 44 ಎಕರೆ ವಿಸ್ತೀರ್ಣದ ರಮ್ಯತಾಣವಾಗಿರುವ ಆವತಿ ಅಭಿವೃದ್ಧಿ ಬಗ್ಗೆ ಜಿಲ್ಲೆಯ ಜನರು ಈ ಹಿಂದಿನಿಂದಲೂ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ. ಕೇಂದ್ರ ಸರ್ಕಾರ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಸಂರಕ್ಷಣಾ ಇಲಾಖೆ ತಂಡ ಇಡೀ ಬೆಟ್ಟದಲ್ಲಿರುವ ಕುರುಹುಗಳನ್ನು ಸಂಗ್ರಹಿಸಿ ಸಮಗ್ರ ಪರಿಶೀಲನೆ ನಡೆಸಿ ವರದಿ ನೀಡಿತ್ತು ಎನ್ನಲಾಗಿದ್ದು, ಇದರಲ್ಲಿ ರಣಭೈರೇಗೌಡರ ಇತಿಹಾಸ ಕುರಿತ ಅನೇಕ ಕುರುಹುಗಳ ಉಲ್ಲೇಖಿಸಲಾಗಿತ್ತು. ಈ ಬಗ್ಗೆ ಆಸಕ್ತಿ ವಹಿಸಿದ ರಾಜ್ಯ ಸರ್ಕಾರ ಆವತಿ ರಣಭೈರೇಗೌಡರ ಕರ್ಮ ಭೂಮಿ ಅಭಿವೃದ್ಧಿಪಡಿಸುವ ಬಗ್ಗೆ ಚಿಂತನೆ ನಡೆಸಿತ್ತ್ತಾದರೂ ಅದೂ ಕಾರ್ಯರೂಪಕ್ಕೆ ಬಂದಿರಲಿಲ್ಲ.
ಭರವಸೆ ಹುಸಿಯಾಗಿದೆ:

ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೃಷ್ಣಭೈರೇಗೌಡ ಅವರು ಆವತಿ ಗ್ರಾಮದಿಂದ ಕೆಂಪೇಗೌಡ ಜ್ಯೋತಿ ಜಾಥಕ್ಕೆ ಚಾಲನೆ ನೀಡಿ 1 ಕೋಟಿ ರೂ.ವೆಚ್ಚದಲ್ಲಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಸಂಸದರಾಗಿದ್ದ ಎಂ.ವೀರಪ್ಪ ಮೊಯಿಲಿ ಕೆಂಪೇಗೌಡರ ವಂಶಸ್ಥರ ನೆನಪಿಗಾಗಿ ವಸ್ತು ಸಂಗ್ರಹಾಲಯ ಆರಂಭಿಸಿ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಲಾಗುವುದೆಂದು ಆಶ್ವಾಸನೆ ನೀಡಿದ್ದರು, ಆದರೆ, ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ

ನಾಡಪ್ರಭು ಕೆಂಪೇಗೌಡರ ಪೂರ್ವಜನ ನೆಲೆಬೀಡು ಎನಿಸಿರುವ ಆವತಿ ಗ್ರಾಮದಲ್ಲಿನ ಆವತಿ ಬೆಟ್ಟದ ಅಭಿವೃದ್ಧಿ ಸಂಬಂಧ ಈಗಾಗಲೇ 5 ಕೋಟಿ ರೂ. ವೆಚ್ಚದ ಅಂದಾಜುಪಟ್ಟಿ ಸಿದ್ದಪಡಿಸಿ ಡಿಪಿಆರ್‌ನಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಹಸಿರು ನಿಶಾನೆ ನಿರೀಕ್ಷೆಯಲ್ಲಿದ್ದೇವೆ. ಸರ್ಕಾರದ ಅನುಮೋದನೆ ದೊರತ ಕೂಡಲೇ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು.

ಸವಿತಾ, ಸಹಾಯಕ ನಿರ್ದೇಶಕಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ

ಪ್ರತಿ ಬಾರಿ ನಾಡಪ್ರಭು ಕೆಂಪೇಗೌಡರ ಜಯಂತಿ ಸಂದರ್ಭದಲ್ಲಿ ಆವತಿ ಬೆಟ್ಟದ ಅಭಿವೃದ್ಧಿಯ ಮಾತುಗಳು ಕೇಳಿಬರುತ್ತವೆ. ಹಲವು ವರ್ಷದಿಂದ ಇಂಥ ಸುದ್ದಿಗಳು ಹರಿದಾಡಿದಿವೆ ಹೊರತು ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಬಾರಿಯಾದರೂ ಸರ್ಕಾರ ಬದ್ಧತೆ ತೋರಬೇಕು. ನಾಡಪ್ರಭುಗಳ ವಂಶಸ್ಥರಾದ ರಣಬೈರೇಗೌಡರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು ಇಲ್ಲಿನ ಐತಿಹಾಸಿಕ ಕುರುಹುಗಳ ಸಂರಕ್ಷಣೆಗೆ ಒತ್ತು ನೀಡಬೇಕು.
ಬಿಟ್ಟಸಂದ್ರ ಗುರುಸಿದ್ದಯ್ಯ, ಇತಿಹಾಸ ಸಂಶೋಧಕರು ದೇವನಹಳ್ಳಿ