ಬೈಂದೂರು: ಕವಿ ಮೊಗೇರಿ ಗೋಪಾಲಕೃಷ್ಣ ಅಡಿಗರು 9ರಿಂದ 14 ವರ್ಷದವರೆಗೆ ಬೈಂದೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ಕನ್ನಡ ಬಾಲ ಕೈಬರಹ ಮಾಸಪತ್ರಿಕೆ ನಡೆಸಿದ ಸಾಹಸಿ. ಸಾಹಿತ್ಯ ಅಧ್ಯಯನದಿಂದ ಯುವ ಕವಿಗಳು ಪ್ರೇರಣೆಗೊಂಡು ಬೈಂದೂರು ಪರಿಸರದಲ್ಲಿ ಮತ್ತಷ್ಟು ಸಾಹಿತ್ಯ ಪ್ರಾಕಾರಗಳು ಬೆಳವಣಿಗೆಯಾಗಲಿ, ಹಿರಿಯರ ಆತ್ಮಕಥನ ಕಿರಿಯರ ಸಾಹಿತ್ಯ ರಚನೆಗೆ ಪ್ರೇರಣೆಯಾಗಲಿ ಹಿರಿಯ ಪತ್ರಕರ್ತರು ಜಯರಾಮ ಅಡಿಗ ಹೇಳಿದರು.
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡಿಗರ 32ನೇ ವಾರ್ಷಿಕ ಪುಣ್ಯಸ್ಮರಣೆಗೆ ಚಾಲನೆ ನೀಡಿ ಮಾತನಾಡಿದರು.
ಸಾಹಿತಿ ಕೆ.ಪುಂಡಲೀಕ ನಾಯಕ್ ನಾಯ್ಕನಕಟ್ಟೆಯವರು ಹಿರಿಯರ ಆತ್ಮಕಥನದ ಮೂಲಕ ಬೈಂದೂರು ಪ್ರಾದೇಶಿಕ ಇತಿಹಾಸ ನಿರೂಪಣೆ ವಿಷಯದ ಕುರಿತು ತಮ್ಮ ಆತ್ಮಕಥನದ ಹಸ್ತಪ್ರತಿಯಲ್ಲಿನ ಕೆಲವು ಶೀರ್ಷಿಕೆ ಉಲ್ಲೇಖಿಸಿ, ಕೆಲವೊಂದು ಘಟನೆ, ಸ್ವರಚಿತ ಕವನಗಳ ಮಾಹಿತಿ ಹಂಚಿಕೊಂಡರು. ಪದವೀಧರ ಮುಖ್ಯಶಿಕ್ಷಕ ಜನಾರ್ದನ ದೇವಾಡಿಗ, ಸುರಭಿ ಕಲಾ ಸಂಸ್ಥೆ ಅಧ್ಯಕ್ಷ ಆನಂದ ಮುದ್ದೋಡಿ, ಲೇಖಕ ಬೈಂದೂರು ಚಂದ್ರಶೇಖರ ನಾವಡ, ಕಸಾಪ ಬೈಂದೂರು ಘಟಕ ಗೋವಿಂದ ಬಿಲ್ಲವ ಶಿರೂರು, ಧಾರ್ಮಿಕ ಮುಖಂಡ, ರಂಗನಿರ್ದೇಶಕ ಕಂಚಿಕಾನು ರವೀಂದ್ರ ಕಿಣಿ, ಯುವಕವಿ, ಕಥೆಗಾರ ಮಂಜುನಾಥ ಮರವಂತೆ, ಇನ್ನೂ ಅನೇಕ ಸಾಹಿತಿ, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಸುರಭಿ ಸಂಸ್ಥೆಯ ನಿರ್ದೇಶಕ ಸುಧಾಕರ ಪಿ.ಬೈಂದೂರು ಸ್ವಾಗತಿಸಿ, ರಾಘವೇಂದ್ರ ಕೆ. ವಂದಿಸಿದರು. ಕುಂದ ಅಧ್ಯಯನ ಕೇಂದ್ರ ಸಂಚಾಲಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರ್ವಹಿಸಿದರು.