ಹುಬ್ಬಳ್ಳಿ : ಜಾಜಿ ಮಲ್ಲಿಗೆ ಕವಿಯೆಂದು ಖ್ಯಾತಿ ಪಡೆದಿರುವ ಕವಿ ಡಾ. ಸತ್ಯಾನಂದ ಪಾತ್ರೋಟ ಅವರ ಆತ್ಮ ಕಥನ ಜಾಲಿಮರದಲ್ಲೊಂದು ಜಾಜಿ ಮಲ್ಲಿಗೆ ಕೃತಿ ಬಿಡುಗಡೆ ಸಮಾರಂಭನ್ನು ಇಲ್ಲಿನ ಪತ್ರಕರ್ತ ಭವನದಲ್ಲಿ ಏರ್ಪಡಿಸಲಾಗಿತ್ತು.
ಕೃತಿ ಬಿಡುಗಡೆಗೊಳಿಸಿದ ಬಂಡಾಯ ಸಾಹಿತಿ ಪ್ರೊ. ಅಲ್ಲಮಪ್ರಭು ಬೆಟದೂರ ಮಾತನಾಡಿ, ಬದುಕಿನಲ್ಲಿ ಎದುರಿಸಿದ ಅವಮಾನ ಶೋಷಣೆಗಳನ್ನೇ ತಮ್ಮ ಕಾವ್ಯದ ವಸ್ತು ಮಾಡಿಕೊಂಡು ಬಂಡಾಯ ಮತ್ತು ದಲಿತ ಸಾಹಿತ್ಯವನ್ನು ಸಮೃದ್ಧಿಗೊಳಿಸಿದ್ದಾರೆ ಎಂದು ತಿಳಿಸಿದರು.
ಲೇಖಕಿ ನಿರ್ಮಲಾ ಶೆಟ್ಟರ ಕೃತಿ ಪರಿಚಯಸಿ ಮಾತನಾಡಿ, ಪಾತ್ರೋಟ ಅವರು ಜೀವನದಲ್ಲಿ ಎದುರಿಸಿದ ನೋವು, ನಲಿವುಗಳನ್ನು ಚಿತ್ರಿಸಿ ಅವುಗಳನ್ನು ಮೆಟ್ಟಿನಿಂತ ಬಗೆಯನ್ನು ವಿವರಿಸಿದ್ದಾರೆ ಎಂದರು.
ಹಿರಿಯ ಸಾಹಿತಿ ಡಾ. ವೈ.ಎಂ. ಭಜಂತ್ರಿ ಮಾತನಾಡಿ, ಪಾತ್ರೋಟ ಅವರು ಗಟ್ಟಿ ಬರಹವನ್ನು ನೀಡಿದ್ದರೂ ವ್ಯವಹಾರಿಕೆ ಜ್ಞಾನವನ್ನು ರೂಢಿಸಿಕೊಳ್ಳದೇ ಬಡವರಾಗೇ ಉಳಿದಿದ್ದಾರೆ. ಆದರೆ ಅವರ ಹಾಡು ಕೋಟಿ ಕೋಟಿ ಜನರಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕವಿ ಸತ್ಯಾನಂದ ಪಾತ್ರೋಟ, ಜಾತಿಯ ಅವಮಾನ ಸಾವಿಗಿಂತ ಭಯಾನಕವಾದದ್ದು. ಸಾಮಾಜಿಕ ವ್ಯವಸ್ಥೆಯಲ್ಲಿ ಹಾಸು ಹೊಕ್ಕಾಗಿರುವ ಜಾತೀಯತೆ ಮತ್ತು ಅಸ್ಪಶ್ಯತೆ ಆಚರಣೆಯಿಂದ ಅನೇಕ ಪ್ರತಿಭೆಗಳು ಬಾಲ್ಯದಲ್ಲಿ ಕಮರಿ ಹೋಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತಿ ಆರ್.ಎಂ. ಗೋಗೇರಿ, ಡಾ. ಶ್ರೀನಿವಾಸ ಕೊಪ್ಪಳ, ಪ್ರೊ. ಎಸ್.ವ್ಹಿ. ಪಟ್ಟಣಶೆಟ್ಟಿ, ಮಹಾಂತಪ್ಪ ನಂದೂರ, ಪ್ರೊ. ಕೆ.ಎಸ್. ಕೌಜಲಗಿ, ಪ್ರಕಾಶ ಕಡಮೆ, ಶಂಕರ ಅಜಮನಿ, ಚನ್ನಬಸಪ್ಪ ಧಾರವಾಡಶೆಟ್ಟರ ಹಾಗೂ ಇತರರು ಇದ್ದರು.
ಸಂಯೋಜಕ ಸಿ.ಎಂ. ಚನ್ನಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಸಾಪ ತಾಲೂಕು ಅಧ್ಯಕ್ಷ ವಿರುಪಾಕ್ಷ ಕಟ್ಟಿಮನಿ ನಿರೂಪಿಸಿದರು. ಎಸ್.ಐ. ನೇಕಾರ ವಂದಿಸಿದರು.