ಮಂಗಳೂರು: ಎಲ್ಲೆಂದರಲ್ಲಿ ಕೈ ತೋರಿಸುವ ಪ್ರಯಾಣಿಕರಿಗೆ ಚಾಲಕ ಸಿಕ್ಕ ಕಡೆ ಆಟೋ ನಿಲ್ಲಿಸಬೇಕು. ಸಾರ್ವಜನಿಕರು, ಮೇಲಧಿಕಾರಿಗಳು ಮತ್ತು ಪ್ರಭಾವಿಗಳ ನಿರ್ದೇಶನಗಳನ್ನು ಜಾರಿಗೊಳಿಸಲು ಮುಂದಾಗುವ ಸಂಚಾರಿ ಪೊಲೀಸರಿಂದ ಬೈಗುಳ ಕೇಳಬೇಕು...ಇದು ಆಟೋ ಚಾಲಕರ ಸ್ಥಿತಿ.
ವಿಸ್ತಾರವಾಗಿ ಬೆಳೆಯುತ್ತಿರುವ ಮಹಾನಗರ ಮಂಗಳೂರಿನಲ್ಲಿ ಆಟೋ ರಿಕ್ಷಾ ನಿಲ್ಲಿಸಲು ವ್ಯವಸ್ಥಿತ ಜಾಗವೇ ಇಲ್ಲ. ಸ್ಮಾರ್ಟ್‌ಸಿಟಿಯಲ್ಲಿ ಸುಮಾರು 20 ಬಸ್ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಆಟೋರಿಕ್ಷಾ ನಿಲ್ದಾಣಗಳ ಸ್ಥಾಪನೆ ಅಥವಾ ಅಭಿವೃದ್ಧಿಯ ಪ್ರಸ್ತಾಪವೇ ಇಲ್ಲ. ಪ್ರವಾಸೋದ್ಯಮಕ್ಕೆ ಪೂರಕವಾಗಿ ಜನಸಾಮಾನ್ಯರ ಅನುಕೂಲಕ್ಕೆ ಸುಲಭವಾಗಿ ದೊರೆಯುವ ಆಟೋರಿಕ್ಷಾಗಳನ್ನು ನಿಲ್ಲಿಸಲು ದಶಕದ ಹಿಂದೆ ನಿರ್ಮಿಸಿದ್ದ ಆಟೋ ನಿಲ್ದಾಣಗಳು ಮಾಯವಾಗಿವೆ.
ಬಂಟ್ಸ್ ಹಾಸ್ಟೆಲ್‌ನ ರಾಮಕೃಷ್ಣ ಕಾಲೇಜು ಮುಂಭಾಗ ರಸ್ತೆ ಕಾಂಕ್ರೀಟೀಕರಣ ನಡೆಯುವ ಮೊದಲು ಸುಮಾರು 50 ಆಟೋ ರಿಕ್ಷಾಗಳು ನಿಲ್ಲುತ್ತಿದ್ದವು. ಈಗ ನಿಲಾಣವಿಲ್ಲದೆ ಆಸುಪಾಸಿನಲ್ಲಿ 10ರಷ್ಟು ಆಟೋಗಳು ನಿಲ್ಲುತ್ತಿವೆ. ಕೆಲ ಅಂಗಡಿ, ಸಂಸ್ಥೆಗಳ ಮಾಲೀಕರು ‘ತಮ್ಮ ಕೇಂದ್ರದ ಎದುರು ಆಟೋ ನಿಲ್ಲಿಸಲಾಗಿದೆ. ತೆಗೆಸಿ’ ಎಂದು ಫೋನ್ ಮೂಲಕ ದೂರು ನೀಡಿ ಪೊಲೀಸರನ್ನು ಕರೆಸುತ್ತಾರೆ. ಕೆಲ ಪೊಲೀಸರು ಬಂದು ಏಕವಚನದಲ್ಲಿ ಬಾಯಿಗೆ ಬಂದ ಹಾಗೆ ನಿಂದಿಸಿ ಓಡಿಸುತ್ತಾರೆ ಎಂದು ನಗರದ ಆಟೋ ಚಾಲಕರೊಬ್ಬರು ತಮ್ಮ ಸಮೂಹದ ಕಷ್ಟ ವಿವರಿಸಿದರು.
510 ಸ್ಥಳ ಗುರುತಿಸಲಾಗಿತ್ತು:2010-11ನೇ ಸಾಲಿನಲ್ಲಿ ಪೊಲೀಸ್, ಕಂದಾಯ ಇಲಾಖೆಗಳು, ಆರ್‌ಟಿಒ ಕಚೇರಿ, ಆಟೋ ಚಾಲಕರು ಹಾಗೂ ಮಾಲೀಕರ ಪ್ರತಿನಿಧಿಗಳು ಸಂಯುಕ್ತ ಸಮೀಕ್ಷೆ ನಡೆಸಿ ಆಟೋ ನಿಲ್ದಾಣಗಳ ನಿರ್ಮಾಣಕ್ಕೆ ನಗರದಲ್ಲಿ ಸುಮಾರು 510 ಸ್ಥಳಗಳನ್ನು ಗುರುತಿಸಿದ್ದರು. ಆದರೆ ಪೊಲೀಸ್ ಇಲಾಖೆ ಇಲ್ಲಿ ಸದ್ಯ 210 ಕಡೆಗಳಲ್ಲಿ ಮಾತ್ರ ನಿಲುಗಡೆ ಸ್ಥಳಗಳನ್ನು ಕಾದಿರಿಸಲು ಅವಕಾಶವಿದೆ ಎಂದು ಅಭಿಪ್ರಾಯ ನೀಡಿತ್ತು.
ಕಾರ್ಯಗತವಾಗದ ಯೋಜನೆ: ಹೊಸ ಆಟೋ ನಿಲ್ದಾಣಗಳ ನಿರ್ಮಾಣ ಯೋಜನೆಗೆ ಮಹಾನಗರ ಪಾಲಿಕೆಯಲ್ಲಿ ಅನುಮೋದನೆ ಹಾಗೂ ಅಂಗೀಕಾರ ಪಡೆಯಲು ಮಂಗಳೂರು 2019-20ರ ತನಕ ಕಾಯಬೇಕಾಯಿತು. ಆದರೆ ಯೋಜನೆ ಇನ್ನೂ ಕಾರ್ಯಗತವಾಗಿಲ್ಲ. ಕಳೆದ ವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೂಡ ಆಟೋ ಚಾಲಕರು ಹಾಗೂ ಮಾಲೀಕರ ಪ್ರತಿನಿಧಿಗಳು ಕೂಡ ಆಟೋ ನಿಲ್ದಾಣಗಳ ಕೊರತೆ ಬಗ್ಗೆ ಜಿಲ್ಲಾಧಿಕಾರಿ ಗಮನ ಸೆಳೆಯಲು ಪ್ರಯತ್ನಿಸಿದ್ದರು.
ಮಂಗಳೂರು ನಗರದಲ್ಲಿ ಅಗತ್ಯ ಪ್ರಮಾಣದ ಆಟೋ ರಿಕ್ಷಾ ನಿಲ್ದಾಣಗಳ ವ್ಯವಸ್ಥೆ ನಿರ್ಮಿಸಬೇಕು ಎನ್ನುವುದು ಆಟೋ ಚಾಲಕರು ಹಾಗೂ ಮಾಲೀಕರ ದೀರ್ಘ ಕಾಲದ ಹೋರಾಟ. ಸ್ಮಾರ್ಟ್‌ಸಿಟಿಯಲ್ಲಿ ಕೂಡ ಆಟೋ ನಿಲ್ದಾಣಗಳಿಗೆ ಅವಕಾಶ ನೀಡಿಲ್ಲ ಎನ್ನುವುದನ್ನು ಮಾಹಿತಿ ಹಕ್ಕಿನಡಿ ನಾವು ಇಲಾಖೆಯಿಂದ ಪಡೆದ ಮಾಹಿತಿಯಲ್ಲಿ ಖಚಿತವಾಗಿದೆ. ನಗರದ ಆಟೋ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೂ ತರಲಾಗಿದೆ. 15 ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ. ಅರುಣ್ ಕುಮಾರ್, ಗೌರವ ಸಲಹೆಗಾರರು, ಕರಾವೇ ಆಟೋ ರಿಕ್ಷಾ ಘಟಕ, ಮಂಗಳೂರು