ಪಡುಬಿದ್ರಿ: ಸಾಲಬಾಧೆಯಿಂದ ತತ್ತರಿಸಿ, ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಪಡುಬಿದ್ರಿಯ ಆಟೋ ಚಾಲಕ ಎಂ. ಸತೀಶ್ ಪೂಜಾರಿ (58)ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈ ಹಿಂದೆ ಬಸ್ ಚಾಲಕರಾಗಿದ್ದ ಸತೀಶ್, ದಶಕಗಳಿಂದ ಪಡುಬಿದ್ರಿಯಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದರು. ಸ್ವಂತ ರಿಕ್ಷಾ ಹೊಂದಲು ಹಾಗೂ ಅನಾರೋಗ್ಯಕ್ಕಾಗಿ ಈ ಹಿಂದೆ ವಿವಿಧೆಡೆ ಸಾಲ ಪಡೆದಿದ್ದರು. ಕರೊನಾ ಹಿನ್ನೆಲೆ ಸಮರ್ಪಕ ದುಡಿಮೆಯಿಲ್ಲದೆ ಸಾಲ ಮರು ಪಾವತಿಸಲಾಗದೆ ಮನನೊಂದು ಪಡುಬಿದ್ರಿ ಪೆಟ್ರೋಲ್ ಬಂಕ್ ಬಳಿ ಮಂಗಳವಾರ ವಿಷ ಸೇವಿಸಿ ಇನ್ನೋರ್ವ ಆಟೋ ಚಾಲಕನಿಗೆ ಮಾಹಿತಿ ನೀಡಿದ್ದರು. ತಕ್ಷಣ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿರುವ ಪಡುಬಿದ್ರಿ ಠಾಣೆ ಪೊಲೀಸರು ತಿಳಿಸಿದ್ದಾರೆ.