ಜಿಲ್ಲೆ

ಮಂಡ್ಯ ನಗರ ಪ್ರವೇಶ ನಿರ್ಬಂಧಕ್ಕೆ ಆಕ್ಷೇಪ: ನ್ಯಾಯ ಕೊಡಿಸಿ, ಇಲ್ಲದಿದ್ದರೆ ದಯಾಮರಣಕ್ಕೆ ಕಲ್ಪಿಸಿ ಎಂದ ಅಫೆ ಆಟೋ ಚಾಲಕರು

ಕೆ.ಎನ್.ರಾಘವೇಂದ್ರ

ಮಂಡ್ಯ: ಅಫೆ ಆಟೋಗಳಿಗೆ ಮಂಡ್ಯ ನಗರ ಪ್ರವೇಶ ನಿರ್ಬಂಧ ಮಾಡದೆ ಹಾಗೂ ಎಲ್ಲ ಮಾದರಿ ಆಟೋದವರಿಗೆ ಒಂದೇ ರೀತಿಯ ನ್ಯಾಯ ದೊರಕಿಸಿಕೊಡಿ ಇಲ್ಲದಿದ್ದರೆ ದಯಾಮರಣ ಕಲ್ಪಿಸಿ ಎಂದು ಒತ್ತಾಯಿಸಿ ಆಫೆ ಆಟೋ ಚಾಲಕರು ಮತ್ತು ಮಾಲೀಕರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಮೈಷುಗರ್ ವೃತದಲ್ಲಿ ಜಮಾಯಿಸಿದ ಆಟೋ ಚಾಲಕರು, ಬಳಿಕ ‘ನೀವು ಬದುಕಿ ನಮ್ಮನ್ನು ಬದುಕಲು ಬಿಡಿ’ ಎಂಬ ಘೋಷಣೆಯೊಂದಿಗೆ ಹಾಗೂ ಸಾಲಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುವ ಚಾಲಕರ ಫೋಟೋಗಳನ್ನಿಡಿದು ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದರು. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ಕಲ್ಪಿಸಿದ ನಂತರ ಆಟೋ ನಂಬಿ ಬದುಕುತ್ತಿದ್ದ ಚಾಲಕರು ಮತ್ತು ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಂಡ್ಯ ನಗರದಲ್ಲಿ ಸಂಚರಿಸುವ ಪ್ರಯಾಣಿಕರ ಆಟೋದವರು ಆಫೆ ಆಟೋದವರು ನಗರ ಪ್ರದೇಶದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಸಂಚಾರ ಮಾಡುತ್ತಾರೆಂದು ತಪ್ಪಾಗಿ ಭಾವಿಸಿದ್ದಾರೆ. ಇದು ಸರಿಯಲ್ಲ. ಆಫೆ ಆಟೋಗಳು ಗ್ರಾಮೀಣ ಪ್ರದೇಶದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಬಸ್ ನಿಲ್ದಾಣ, ರೈಲು ನಿಲ್ದಾಣ ಹತ್ತಿರ ಇಳಿಸಿ ಮತ್ತೆ ಗ್ರಾಮೀಣ ಪ್ರದೇಶಕ್ಕೆ ಖಾಲಿ ಹೋಗುತ್ತಿವೆ ಎಂದು ಹೇಳಿದರು.

ಮಂಡ್ಯ ನಗರ ಪ್ರದೇಶದ ಸುತ್ತಳತೆ ಕೇವಲ ಮೂರು ಕಿ.ಮೀ ಇದೆ. ಪ್ರಯಾಣಿಕರ ಆಟೋಗೆ 12 ಕಿ.ಮೀ ಹಾಗೂ ಆಫೆ ಆಟೋದವರಿಗೆ ಎಂಟು ಕಿ.ಮೀ ಸಂಚರಿಸಲು ಪರವಾನಗಿ ನೀಡಲಾಗಿದೆ. ಹಳ್ಳಿಗಳಿಂದ ನಗರಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಆಫೆ ಆಟೋಗಳು ಬರುತ್ತಿವೆಯೇ ಹೊರತು ನಗರದಲ್ಲಿ ಬಾಡಿಗೆ ಹೊಡೆಯುತ್ತಿಲ್ಲ. ನಗರದ ಸಂಚರಿಸುವ ಆಟೋಗಳು ಪ್ರಯಾಣಿಕರು, ಶಾಲಾ ಮಕ್ಕಳು ಹಾಗೂ ಸರಕು ತುಂಬಿಕೊಂಡು ಹಳ್ಳಿಗಳಿಗೆ ಬರುತ್ತಾರೆ. ಮತ್ತೆ ಅಲ್ಲಿಂದ ಪ್ರಯಾಣಿಕರನ್ನು ತುಂಬಿಕೊಂಡು ನಗರಕ್ಕೆ ಬರುತ್ತಾರೆ. ನಾವು ಕಂಡರೂ ಸಹ ಪ್ರಶ್ನಿಸಿಲ್ಲ ಎಂದು ತಿಳಿಸಿದರು.

ಎಲ್ಲರೂ ಸಹ ಸಾಲ ಮಾಡಿ ಆಟೋ ಖರೀದಿ ಮಾಡಿರುತ್ತಾರೆ. ಯಾರ ಆದಾಯಕ್ಕೂ ಕತ್ತರಿ ಬೀಳಬಾರದು ಎಂಬ ಮನೋಭಾವ ನಮ್ಮದಾಗಿದೆ. ನಾವೆಲ್ಲರೂ ಒಗ್ಗೂಡಿ ಸಹಜೀವನ ನಡೆಸಬೇಕು. ನಮ್ಮ ಜೀವನಕ್ಕೆ ನಾವು ಕಲ್ಲು ಹಾಕಿಕೊಳ್ಳಬಾರದು. ಈಗಾಗಲೇ ಸಾಲ ತೀರಿಸಲು ಸಾಧ್ಯವಾಗದೆ ಆಫೆ ಆಟೋದ ಏಳು ಚಾಲಕರು ನೇಣಿಗೆ ಕೊರಳೊಡ್ಡಿದ್ದಾರೆ. ನಮ್ಮ ಪರಿಸ್ಥಿತಿಯನ್ನು ಕೂಡ ಅರಿತುಕೊಂಡು ಅವಕಾಶ ಮಾಡಿಕೊಡಬೇಕು. ನಗರ ಪ್ರದೇಶದಲ್ಲಿ ಆಫೆ ಆಟೋಗಳಿಗೆ ದಂಡ ಹಾಕುತ್ತಿರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಆಟೋ ಚಾಲಕರಾದ ಪುನೀತ್, ಕಾಂತರಾಜ್, ಮಧುಕುಮಾರ್ ಉಮ್ಮಡಹಳ್ಳಿ, ಕಾಶಿ ಹೆಗಡೆ, ವೆಂಕಟೇಶ್, ಚೇತನ್, ಪ್ರದೀಪ್, ಅಭಿ, ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಯೋಗಣ್ಣ ಇತರರಿದ್ದರು.