ಶಿರಸಿ: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದ ಆಟೋ ಚಾಲಕರು ಮತ್ತು ಮಾಲೀಕರು ಆರ್ಥಿಕವಾಗಿ ಹಾನಿ ಅನುಭವಿಸುತ್ತಿದ್ದಾರೆ. ಈ ಹಿನ್ನ್ನೆಲೆಯಲ್ಲಿ ಸರ್ಕಾರ ಆಟೋ ಚಾಲಕ ಮತ್ತು ಮಾಲೀಕರಿಗೆ ಪ್ರತಿ ತಿಂಗಳು 10 ಸಾವಿರ ರೂ. ಸಹಾಯಧನ ನೀಡದಿದ್ದರೆ ಜುಲೈ 11ರಂದು ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ನಗರ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 8,000 ಕ್ಕೂ ಹೆಚ್ಚು ಆಟೋ ರಿಕ್ಷಾಗಳಿವೆ. ಜಿಲ್ಲೆಯು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಸರಿಯಾದ ಬಾಡಿಗೆ ಇಲ್ಲದೆ ಬಂದ ಹಣದಲ್ಲಿ ಆಟೋ ಚಾಲಕರು, ಮಾಲೀಕರು ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ರಾಜ್ಯದಲ್ಲಿ ಅಂದಾಜು 8 ಲಕ್ಷಕ್ಕೂ ಹೆಚ್ಚು ಆಟೋ ರಿಕ್ಷಾಗಳಿದ್ದು, ಇವುಗಳಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ತೆರಿಗೆ ಬರುತ್ತಿದೆ.
ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಆಟೋ ಚಾಲಕರು, ಮಾಲೀಕರು ದುಡಿಮೆ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ನಂತರದ ದಿನಗಳಿಂದ ಚೇತರಿಕೆ ಕಾಣುತ್ತಿತ್ತು. ಆದರೆ, ಈಗ ಕರ್ನಾಟಕ ಸರ್ಕಾರವು ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಘೋಷಿಸಿರುವುದರಿಂದ ಬಾಡಿಗೆ ಇಲ್ಲದೆ ಪರಿತಪಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಜುಲೈ 11 ರಂದು ಶಿರಸಿಯ ಹಳೇ ಬಸ್ ನಿಲ್ದಾಣ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಶ್ರೀ ಮಾರಿಕಾಂಬಾ ಆಟೋ ಚಾಲಕ, ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಮಾತನಾಡಿ, ಆಟೋ ರಿಕ್ಷಾ ಖರೀದಿಸಲು ಹೊಸದಾಗಿ ಪರ್ಮಿಟ್ ನೀಡಬಾರದು ಎಂದು ಆಗ್ರಹಿಸಿದರು. ನರಸಿಂಹ ನಾಯ್ಕ, ನಾಗರಾಜ ಪಟಗಾರ, ಈಶ್ವರ ಆಚಾರಿ, ಮಹೇಶ ಶೆಟ್ಟಿ ಇತರರು ಇದ್ದರು.