ಜಿಲ್ಲೆ

ಶಕ್ತಿ ಯೋಜನೆ ವಿರುದ್ಧ ಆಟೋ ಚಾಲಕರ ಆಕ್ರೋಶ

ಮರಿದೇವ ಹೂಗಾರ

ಹುಬ್ಬಳ್ಳಿ: ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ವಿರುದ್ಧ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ಪದಾಧಿಕಾರಿಗಳು ಬಂದ್ ಆಚರಿಸುವ ಮೂಲಕ ನಗರದ ಚನ್ನಮ್ಮ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, ನಗರ ಸಾರಿಗೆ ಹೊರತುಪಡಿಸಿ ಮಹಿಳೆಯರಿಗೆ ಬೇರೆ ಎಲ್ಲಾದರೂ ಉಚಿತ ಬಸ್ ಪ್ರಯಾಣ ನೀಡಬೇಕು. ಅಂದರೆ ನಗರದಿಂದ 25 ಕಿ.ಮೀ. ಹೊರತುಪಡಿಸಿ ಉಚಿತ ಬಸ್ ಪ್ರಯಾಣ ಕಲ್ಪಿಸಬೇಕು. ಆಟೋ ರಿಕ್ಷಾ ಚಾಲಕರ ನಿಗಮ ಮಂಡಳಿ ರಚಿಸಬೇಕು. ಆಟೋ ಕಾಲನಿ ಮಾಡಿಕೊಡಬೇಕು. ಆಟೋರಿಕ್ಷಾ ಚಾಲಕರ ಮಕ್ಕಳಿಗೆ ಉಚಿತವಾಗಿ ಉನ್ನತ ಶಿಕ್ಷಣ ನೀಡಬೇಕು ಎಂದು ಆಗ್ರಹಿಸಿದರು.

60 ವರ್ಷದ ನಂತರ ಪಿಂಚಣಿ ಕೊಡಬೇಕು. 2 ಮತ್ತು 3 ಚಕ್ರದ ಇಲೆಕ್ಟ್ರಿಕಲ್ ವಾಹನಗಳನ್ನು ಗುತ್ತಿಗೆ ಆಧಾರದ ಮೇಲೆ, ಬಾಡಿಗೆ ರೂಪದಲ್ಲಿ ಅನುಮತಿ ಕೊಡಬಾರದು. ಚಾಲಕರು ಅಪಘಾತದಲ್ಲಿ ಮೃತಪಟ್ಟರೆ ಎಫ್​ಐಆರ್ ದಾಖಲೆಯ ಮೇಲೆ 5 ಲಕ್ಷ ರೂ. ಪರಿಹಾರ ಕೊಡಬೇಕು. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸಮುದಾಯ ಭವನ ನಿರ್ವಿುಸಬೇಕು. ಪ್ರತಿ ಜಿಲ್ಲೆಗಳಲ್ಲಿ 50 ಕಿ.ಮೀ. ಆಟೋ ಓಡಿಸಲು ಅನುಮತಿ ಕೊಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ವಿುಕ ಸಚಿವ ಸಂತೋಷ ಲಾಡ್, ಆಟೋ ಚಾಲಕರ ಬೇಡಿಕೆಗಳ ಕುರಿತು ನೇರವಾಗಿ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.

ಉಪಾಧ್ಯಕ್ಷ ಹನುಮಂತ ಪವಾಡಿ, ಆಟೋರಿಕ್ಷಾ ಚಾಲಕರಾದ ಹನುಮಂತ ಛಲವಾದಿ, ಮಾರುತಿ ಹಾಲಹರವಿ, ಪ್ರಕಾಶ ಹಳ್ಳೂರ, ಇಮ್ತಾಜ್ ಉಡುಪಿ, ಮಹೇಶ ಪಾಟೀಲ, ಪ್ರವೀಣ ಬೆಂಗೇರಿ, ನಿಂಗಪ್ಪ ಗೊರಪ್ಪನವರ, ರಮೇಶ ಬೋಸ್ಲೆ, ಜೀವನ್ ಉತ್ಕೂರಿ ಇತರರು ಇದ್ದರು.

25 ಸಾವಿರಕ್ಕೂ ಆಟೋಗಳ ಸಂಚಾರ ಸ್ಥಗಿತ: ಆಟೋರಿಕ್ಷಾ ಚಾಲಕರು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಗರದಲ್ಲಿ ಪ್ರತಿಭಟನೆ ನಡೆಸಿದ್ದರಿಂದ 25 ಸಾವಿರಕ್ಕೂ ಹೆಚ್ಚು ಆಟೋರಿಕ್ಷಾಗಳ ಸಂಚಾರ ಸ್ಥಗಿತಗೊಂಡಿತ್ತು. ಆಟೋರಿಕ್ಷಾಗಳಲ್ಲಿ ಶಾಲೆಗಳಿಗೆ ಮಕ್ಕಳನ್ನು ಬಿಟ್ಟು ಬರುವುದು ಸ್ಥಗಿತಗೊಂಡಿತ್ತು. ಆಟೋಗಳಲ್ಲಿ ಶಾಲೆಗೆ ಹೋಗುತ್ತಿದ್ದ ಮಕ್ಕಳನ್ನು ಪಾಲಕರೇ ಸ್ವಂತ ವಾಹನಗಳಲ್ಲಿ ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿತು.