ಮೈಸೂರು: ಲಾಕ್‌ಡೌನ್ ಸಡಿಲಗೊಂಡ ನಂತರ ನಗರದಲ್ಲಿ ಆಟೋ ಸಂಚಾರ ಪ್ರಾರಂಭಗೊಂಡರೂ ಬಾಡಿಗೆ ದೊರೆಯದೆ ಆಟೋ ಚಾಲಕರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ನಗರದಲ್ಲಿ 25 ಸಾವಿರ ಆಟೋ ಇದ್ದು, ಪ್ರತಿನಿತ್ಯ ಕನಿಷ್ಠ 20 ಸಾವಿರ ಆಟೋಗಳು ಬೀದಿಗಿಳಿಯುತ್ತವೆ. ಆದರೆ, ಮಂಗಳವಾರ ಇದರ ಅರ್ಧ ಭಾಗದಷ್ಟು ಕೂಡ ರಸ್ತೆಗೆ ಇಳಿಯಲಿಲ್ಲ. ರಸ್ತೆಗಿಳಿದ ಆಟೋಗಳಿಗೂ ಬಾಡಿಗೆ ದೊರೆಯಲಿಲ್ಲ. ನಗರದ ಗ್ರಾಮಾಂತರ ಬಸ್ ನಿಲ್ದಾಣದ ಆಟೋ ಚಾಲಕರಿಗೆ ಒಂದಷ್ಟು ಬಾಡಿಗೆ ಆಗಿರುವುದು ಬಿಟ್ಟರೆ ನಗರದ ವಿವಿಧ ಆಟೋ ನಿಲ್ದಾಣದ ಚಾಲಕರಿಗೆ ಬಾಡಿಗೆ ದೊರೆಯಲಿಲ್ಲ. ಮೊದಲ ದಿನ ಸಾಕಷ್ಟು ಚಾಲಕರು ದುಡಿಮೆ ಇಲ್ಲದೆ ನಿರಾಸೆಯಿಂದ ಮನೆಗೆ ಹಿಂದಿರುಗಿದ್ದಾರೆ.
ನಿತ್ಯ ಆಟೋ ಬೀದಿಗಿಳಿಯಬೇಕಾದರೆ 200 ರೂ. ಗ್ಯಾಸ್‌ನ ಅವಶ್ಯಕತೆ ಇದೆ. ಮಾಲೀಕರಿಗೆ 150 ರಿಂದ 200 ರೂ. ನೀಡಬೇಕು. ಆದರೆ, ನಗರದಲ್ಲಿ ಜನಸಂಚಾರ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲದ ಹಿನ್ನೆಲೆಯಲ್ಲಿ ಬಾಡಿಗೆ ದೊರೆಯುತ್ತಿಲ್ಲ ಎಂದು ಆಟೋ ಚಾಲಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
5 ಸಾವಿರ ರೂ. ಬಂದಿಲ್ಲ: ಸರ್ಕಾರ ಆಟೋ ಚಾಲಕರಿಗೆ 5 ಸಾವಿರ ರೂ.ಸಹಾಯಧನ ಘೋಷಿಸಿದೆ. ಆದರೆ, ಈವರೆಗೆ ಸಹಾಯಧನ ಕೈ ಸೇರಿಲ್ಲ. ಸರ್ಕಾರದ ಮಾರ್ಗಸೂಚಿ ಪ್ರಕಾರ ಆಟೋ ಚಾಲಕರು ತಮ್ಮ ಡಿಎಲ್, ಬ್ಯಾಡ್ಜ್, ಆಟೋ ಸಂಖ್ಯೆಯನ್ನು ಸೇವಾಸಿಂಧು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಆದರೆ, ಸಾಕಷ್ಟು ಆಟೋ ಚಾಲಕರ ಬಳಿ ಆಟೋ ಇಲ್ಲ. ಹೀಗಾಗಿ ಸರ್ಕಾರದ ಸವಲತ್ತು ಮಾಲೀಕರಿಗೆ ಮಾತ್ರ ದೊರೆಯುವ ಸಾಧ್ಯತೆ ಇದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂಬುದು ಆಟೋ ಚಾಲಕ ಸಾಯಿಬಾಬ ನಾಗರಾಜ್ ಅವರ ಒತ್ತಾಯ.