ದಾಂಡೇಲಿ: ಸ್ಥಳೀಯ ಜೆ.ಎನ್. ರಸ್ತೆಯ ತುಂಬಾ ಬಿದ್ದಿರುವ ತೆಗ್ಗು, ಗುಂಡಿಗಳನ್ನು ಸಿಮೆಂಟ್ ಹಾಕಿ ಮುಚ್ಚುವ ಮೂಲಕ ರಸ್ತೆ ದುರಸ್ತಿ ಮಾಡಬೇಕು ಎಂದು ನಗರದ ಆಟಲ್ ಅಭಿಮಾನಿ ಸಂಘಟನೆ ಹಾಗೂ ರಾಯಲ್ ಆಟೋ ಚಾಲಕರು ಶುಕ್ರವಾರ ನಗರಸಭೆ ಅಧಿಕಾರಿಗಳನ್ನು ಆಗ್ರಹಿಸಿದರು.
ಜೆ.ಎನ್. ರಸ್ತೆ ತುಂಬಾ ತೆಗ್ಗು, ಗುಂಡಿಗಳು ಬಿದ್ದಿದ್ದು, ಸುಗಮ ಸಂಚಾರಕ್ಕೆ ಸಂಚಕಾರ ತಂದಿದೆ. ಮಳೆ ಇದ್ದಾಗ ಕೆಸರುಗದ್ದೆಯಂತಾಗಿ ಮಾರ್ಪಡುವ ಹಾಗೂ ಮಳೆ ಇಲ್ಲದಿದ್ದಾಗ ಧೂಳು ಹರಡಿಕೊಂಡು ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ ಹಾಳಾದ ರಸ್ತೆ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಟಲ್ ಅಭಿಮಾನಿ ಸಂಘಟನೆ ಅಧ್ಯಕ್ಷ ವಿಷ್ಣು ನಾಯರ ಮಾತನಾಡಿ, ಈ ರಸ್ತೆಯ ಸಮಸ್ಯೆ ಕುರಿತು ಪ್ರತಿ ವರ್ಷವೂ ದುರಸ್ತಿಗಾಗಿ ಹೋರಾಟ ಮಾಡಲೇಬೇಕಾಗಿದೆ. ಯುಜಿಡಿ ಕಾಮಗಾರಿಯಿಂದಾಗಿ ಹದಗೆಟ್ಟಿರುವ ಈ ರಸ್ತೆಯ ಶಾಶ್ವತ ದುರಸ್ತಿಗೆ ಇದುವರೆಗೆ ಅಗತ್ಯ ಕ್ರಮ ಕೈಗೊಳ್ಳದಿರುವುದು ದುರ್ದೈವದ ಸಂಗತಿಯಾಗಿದೆ. ಆದಷ್ಟು ಬೇಗ ರಸ್ತೆ ಸರಿಪಡಿಸಬೇಕು ಎಂದರು.
ಪ್ರಮುಖರಾದ ಹನೀಫ್ ಬೋಚಳ್ಳಿ, ಅನೀಶ ಸನದಿ, ಅಲ್ತಾಫ್ ಪಿರ್ಜಾದೆ, ಯೂನುಸ್ ಪಟೇಲ್, ಪಾಂಡುರಂಗ ಮೊಟಾಚೆ, ಲಕ್ಷ್ಮಣ್ ನಾಯ್ಕ ಉಸ್ಮಾನ್ ಶೇಖ, ಮಹಮ್ಮದ್ ಅಲಿ ಕಳಸಾಪುರ, ಬಾಳಪ್ಪ ಕುಂಬಾರ, ಹನೀಫ್ ಖಾನ್, ಇರ್ಷಾದ್ ಸೈಯದ್ ಬಸವರಾಜ ಇಳಿಗೆ, ಅಲ್ತಾಫ್ ಚೋದ್ರಿ ರಾಯಲ್ ಅಟೋ ಚಾಲಕರು ಇದ್ದರು.