ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿ ನಗರದಲ್ಲಿ ಬಾಡಿಗೆಯ ವಿಚಾರದಲ್ಲಿ ಆಟೋ ಯೂನಿಯನ್ಗಳ ಮಧ್ಯೆ ವರ್ಷದಿಂದ ನಡೆಯುತ್ತಿರುವ ಗಲಾಟೆ ಮುಂದುವರಿದಿದ್ದು, ಕೆಲವು ಚಾಲಕರು ಸೇರಿ ಸಹೋದ್ಯೋಗಿ ಚಾಲಕನಿಗೆ ಗುರುವಾರ ಗಂಭೀರ ಹಲ್ಲೆ ಮಾಡಿದ್ದಾರೆ.
ನಗರದ ಬಿಗ್ ಬಝಾರ್ ಸಮೀಪದ ಪಾರ್ಕಿಂಗ್ನಲ್ಲಿ ಹಲ್ಲೆ ನಡೆದಿದ್ದು, ಗಾಯಗೊಂಡಿರುವ ಚಾಲಕ ಪ್ರಸಾದನನ್ನು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯನ್ನು ಖಂಡಿಸಿ ಅನೇಕ ಆಟೊ ಚಾಲಕರು ಆಸ್ಪತ್ರೆಯ ಬಳಿ ಜಮಾಯಿಸಿ ಪ್ರತಿಭಟಿಸಿದರು. ರಾಘು ಮತ್ತು ಸಹಚರರು ಹಲ್ಲೆ ನಡೆಸಿದ್ದಾಗಿ ಸಹೋದ್ಯೋಗಿಗಳು ಆರೋಪಿಸಿದರು.
ಹಲ್ಲೆ ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ನಗರದೊಳಗೆ ಐದು ಯೂನಿಯನ್ ಗಳಿದ್ದು, ನಗರದೊಳಗೆ ನಮಗೇ ಬಾಡಿಗೆ ಮಾಡಲು ಬಿಡುತ್ತಿಲ್ಲ. ಅವರವರ ಸಂಘ ಅವರವರಿಗೆ. ಇದೇ ವಿಚಾರವಾಗಿ ಈ ಹಿಂದೆಯೂ ಹಲ್ಲೆ ನಡೆದಿದೆ. ನಾವೆಲ್ಲಿಗೆ ಹೋಗಬೇಕು? ನಗರಸಭೆ ವ್ಯಾಪ್ತಿಯಲ್ಲಿ ಎಲ್ಲಿ ಬೇಕಿದ್ದರೂ ಬಾಡಿಗೆ ಮಾಡಬಹುದು ಎಂದು ಪೊಲೀಸ್ ಇಲಾಖೆ, ನಗರಸಭೆ ಈಗಾಗಲೇ ಅನುಮತಿ ಕೊಟ್ಟಿದೆ. ಆದರೂ ನಮ್ಮ ಮೇಲೆ ಆಟೋ ಚಾಲಕರೇ ದಬ್ಬಾಳಿಕೆ ಮಾಡುತ್ತಿದ್ದಾರೆ. ಈ ವಿಷಯವನ್ನು ಶಾಸಕರು, ಇನ್ನಿತರ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನಮಗೆ ನ್ಯಾಯ ಬೇಕು ಎಂದು ಆಟೋ ಚಾಲಕರು ಒತ್ತಾಯಿಸಿದರು.